ಮಾರ್ಕ್-3 ಯಶಸ್ವಿ ಉಡಾವಣೆ

GSLV-01

ಶ್ರೀಹರಿಕೋಟಾ,ಜೂ.5- ತನ್ನ ಇತಿಹಾಸದ ಅತೀ ದೊಡ್ಡ ಹಾಗೂ ತೂಕದ ಉಪಗ್ರಹ ಉಡಾವಣಾ ವಾಹಕ ಜಿಎಸ್‍ಎಲ್ವಿ ಮಾರ್ಕ್-3ಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಶಸ್ವಿಯಾಗಿ ಉಡಾಯಿಸಿದೆ.  ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಸಂಜೆ 5.28 ನಿಮಿಷಕ್ಕೆ ಈ ರಾಕೆಟ್ ನ್ನು ಯಶಸ್ವಿಯಾಯಾಗಿ ಉಡಾಯಿಸಲಾಯಿತು.ಮಾನವಸಹಿತ ಬಾಹ್ಯಾಕಾಶಯಾನಕ್ಕಾಗಿ ಈ ಬೃಹತ್ ರಾಕೆಟ್ ಅನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅಭಿವೃದ್ಧಿಪಡಿಸಿದ್ದು, ಇದು ಈ ವರೆಗೆ ಇಸ್ರೋ ಅಭಿವೃದ್ಧಿ ಪಡಿಸಿದ ರಾಕೆಟ್ ಗಳಲ್ಲೇ ಅತ್ಯಂತ ತೂಕದ ಮತ್ತು ಬೃಹತ್ ರಾಕೆಟ್ ಎಂಬ ಖ್ಯಾತಿಗೆ ಒಳಗಾಗಿದೆ.  ಭವಿಷ್ಯದಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ಮಾನವಸಹಿತ ಬಾಹ್ಯಾಕಾಶ ಯಾತ್ರೆಗೂ ಇದೇ ರಾಕೆಟ್ ಬಳಕೆಯಾಗಲಿದ್ದು, ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಾಮರ್ಥ್ಯವನ್ನು ಈ ರಾಕೆಟ್ ಹೊಂದಿರುವುದರಿಂದ ಬಾಹ್ಯಾಕಾಶಕ್ಕೆ ಗಗನಯಾನಿಗಳನ್ನು ಕಳುಹಿಸುವ ಭಾರತದ ಕನಸು ಮತ್ತಷ್ಟು ಹತ್ತಿರವಾಗಲಿದೆ. ಇಲ್ಲಿಯವರೆಗೆ ರಷ್ಯಾ, ಚೀನಾ ಮತ್ತು ಅಮೆರಿಕಾ ಮಾತ್ರ ತಮ್ಮದೇ ಉಡಾವಣಾ ವಾಹಕದಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದು, ಈ ಅವಕಾಶ ಭಾರತದ ಪಾಲಿಗೂ ತೆರೆದುಕೊಂಡಿದೆ.

300 ಕೋಟಿ ಖರ್ಚು:

ಒಂದು ‘ಜಿಎಸ್‍ಎಲ್ವಿ ಮಾರ್ಕ್ 3 ಉಡಾವಣೆಗೆ ಸುಮಾರು 300 ಕೋಟಿ ರೂಪಾಯಿ ಖರ್ಚಾಗಲಿದೆ. ಸತತ ಆರು ಪರೀಕ್ಷೆಗಳು ಯಶಸ್ವಿಯಾದ ಬಳಿಕ ಈ ಜಿಎಸ್‍ಎಲ್ವಿ ಮಾರ್ಕ್ 3ಯಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಬಹುದಾಗಿದೆ. ಒಂದು ಅಂದಾಜಿನ ಪ್ರಕಾರ ಮುಂದಿನ 15 ವರ್ಷಗಳ ಒಳಗೆ ಭಾರತ ಗಗನಯಾನಿಗಳನ್ನು ಅಂತರಿಕ್ಷಕ್ಕೆ ಕಳುಹಿಸಲಿದೆ. ಈ ರಾಕೆಟ್ 43 ಮೀಟರ್ ಉದ್ದವಿದೆ. ಅಂದರೆ 13 ಮಹಡಿಗಳ ಕಟ್ಟಡದಷ್ಟು ದೊಡ್ಡದಿದೆ. ಒಟ್ಟು ಈ ರಾಕೆಟ್ 640 ಟನ್ ತೂಕವಿದ್ದು ಏಕಕಾಲಕ್ಕೆ 4 ಟನ್ ಗಳಷ್ಟು ತೂಕದ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲುದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin