ಮಾರ್ಚ್ ವೇಳೆಗೆ ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ ವ್ಯವಸ್ಥೆ

Spread the love

Namma-Metro--01

ಬೆಂಗಳೂರು,ಡಿ.22-ನಮ್ಮ ಮೆಟ್ರೊದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಮೀಸಲಿರಿಸಬೇಕೆಂಬ ಬೇಡಿಕೆ ಮಾರ್ಚ್ ತಿಂಗಳ ವೇಳೆಗೆ ಈಡೇರುವ ಸಾಧ್ಯತೆಯಿದ್ದು, ಜನವರಿ ಕೊನೆ ವಾರದಲ್ಲಿ ಮೊದಲ ಮೂರು ಬೋಗಿಗಳು ಮೆಟ್ರೊಗೆ ದೊರೆಯಲಿದೆ. ಹೀಗೆ ಹೆಚ್ಚುವರಿಯಾಗಿ ಬೋಗಿ ದೊರೆತಾಗ ಅದರಲ್ಲಿ ಒಂದು ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲು ಉದ್ದೇಶಿಸಲಾಗಿದೆ. ಆದರೆ, ಹೆಚ್ಚುವರಿ ಬೋಗಿಗಳು ಜನವರಿಗೆ ದೊರೆತರೂ ಅದು ಪ್ರಾಯೋಗಿಕ ಪರೀಕ್ಷೆ ನಡೆಸಿ ಬಳಕೆಗೆ ತರಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಹೀಗಾಗಿ ನಮ್ಮ ಮೆಟ್ರೊದಲ್ಲಿ ಮಹಿಳಾ ಮೀಸಲು ಬೋಗಿಗಳು ಮಾರ್ಚ್ ವೇಳೆಗೆ ಅಳಡಿಸಲಾಗುತ್ತದೆ ಎಂದು ಬಿಎಂಆರ್ ಸಿಎಲ್ ಮೂಲಗಳು ಹೇಳಿವೆ.

ಮೆಟ್ರೊದಲ್ಲಿರುವ ಸದ್ಯದ 3 ಬೋಗಿಗಳನ್ನು 6 ಬೋಗಿಗಳಿಗೆ ಹೆಚ್ಚಿಸುವ ಸಲುವಾಗಿ ಹೊಸ ಬೋಗಿಗಳ ನಿರ್ಮಾಣಕ್ಕಾಗಿ ಬಿಇಎಂಎಲ್‍ಗೆ ಗುತ್ತಿಗೆ ವಹಿಸಲಾಗಿದೆ. ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಗುರುವಾರ ಬಿಇಎಂಎಲ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಬಿಇಎಂಎಲ್ ಅಧಿಕಾರಿಗಳು ಬೋಗಿ ಪೂರೈಕೆ ಬಗ್ಗೆ ಖಚಿತಪಡಿಸಿದ್ದಾರೆ.

2018ರ ಜನವರಿ ಕೊನೆ ವಾರದಲ್ಲಿ ಹೊಸದಾಗಿ ಮೂರು ಬೋಗಿಗಳು ದೊರೆತರೂ ಇದನ್ನು ರೈಲಿಗೆ ಅಳವಡಿಸಲು ಸಾಧ್ಯವಿಲ್ಲ. ಮೊದಲ ಎರಡು ತಿಂಗಳು ಈ ಬೋಗಿಗಳನ್ನು ಪರೀಕ್ಷಿಸಲಾಗುತ್ತದೆ.ಪರೀಕ್ಷೆಯಲ್ಲಿ ಬೋಗಿ ಉತ್ತಮವಾಗಿದೆ ಎಂದು ದೃಢಪಟ್ಟರೆ ಮಾತ್ರ ರೈಲಿಗೆ ಅಳವಡಿಸಲಾಗುತ್ತದೆ. ಅಂದರೆ ಆರು ಬೋಗಿ ರೈಲು ಬರಲು ಮಾರ್ಚ್‍ವರೆಗೆ ಕಾಯಬೇಕಾಗುತ್ತದೆ. ಮೂರು ಬೋಗಿ ರೈಲನ್ನು 6 ಬೋಗಿಯಾಗಿ ಪರಿವರ್ತಿಸಲು ಬಿಎಂಆರ್‍ಸಿಎಲ್ ಸರ್ಕಾರ ಹಾಗೂ ಕೆಲ ಸಂಸ್ಥೆಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಇದಕ್ಕೂ ಸ್ವಲ್ಪಕಾಲಬೇಕಾಗುತ್ತದೆ.

6 ಬೋಗಿ ಮೆಟ್ರೋ ರೈಲು ಸಂಚಾರ : 

ಜನವರಿ ಅಂತ್ಯದ ವೇಳೆಗೆ 6 ಬೋಗಿಯ ಒಂದು ಮೆಟ್ರೋ ರೈಲು ಸಂಚಾರ ಪ್ರಾರಂಭವಾಗುವ ನಿರೀಕ್ಷೆ ಇದೆ. ಬಿಎಂಆರ್‍ಸಿಎಲ್‍ಗೆ 3 ಬೋಗಿಗಳನ್ನು ಬಿಇಎಂಎಲ್ ಸರಬರಾಜು ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಮೆಟ್ರೋದಲ್ಲಿ ಪ್ರತಿನಿತ್ಯ 1.50 ರಿಂದ 2 ಲಕ್ಷ ಜನರು ಪ್ರಯಾಣಿಕರು ಸಂಚರಿಸುತ್ತಾರೆ. ಬೆಳಗ್ಗೆ 7 ರಿಂದ 10 ಗಂಟೆ ಹಾಗೂ ಸಂಜೆ 5 ರಿಂದ8 ರವರೆಗೆ ಮೆಟ್ರೋದಲ್ಲಿ ಕಾಲಿಡಲಾಗದಷ್ಟು ಪ್ರಯಾಣಿಕರ ದಟ್ಟಣೆ ಇರುತ್ತದೆ. ಪ್ರತಿ ಕಿ.ಮೀ ನಡುವೆ10 ಸಾವಿರ ಜನ ಸಂಚಿರಿಸುತ್ತಾರೆ. ಹೀಗಾಗಿಯೇ ವಿಶ್ವದ ಅತಿ ಹೆಚ್ಚು ದಟ್ಟಣೆಯ ಮೆಟ್ರೋಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದು ಎಂಬ ಹೆಗ್ಗಳಿಕೆಯಿದೆ. ದಿನದಿಂದ ದಿನಕ್ಕೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಿರುವ 3 ಬೋಗಿಯ ರೈಲುಗಳನ್ನು 6 ಬೋಗಿಗೆ ಪರಿವರ್ತಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ.

1,421 ಕೋಟಿ ರೂ. ವೆಚ್ಚದಲ್ಲಿ 150 ಬೋಗಿಗಳನ್ನು ತಯಾರಿಸಿ ಕೊಡುವುದಾಗಿ ಕಳೆದ ಮಾರ್ಚ್‍ನಲ್ಲೇ ಬಿಇಎಂಎಲ್ ಒಪ್ಪಂದ ಮಾಡಿಕೊಂಡಿದೆ. ಇದರ ಅನ್ವಯ ಜನವರಿ ಅಂತ್ಯದೊಳಗೆ 3 ಬೋಗಿಗಳನ್ನು ಬಿಇಎಂಎಲ್ ಸರಬರಾಜು ಮಾಡಲಿದ್ದು, ಇವುಗಳನ್ನು ಈಗಿರುವ 3 ಬೋಗಿಯ ನಡುವೆ ಸೇರಿಸಲಾಗುತ್ತದೆ.
6 ಬೋಗಿಯ ರೈಲು ಸೇವೆ ಪ್ರಾರಂಭವಾದರೆ ಒಂದು ಬೋಗಿಯಲ್ಲಿ ಒಟ್ಟು 1, 576ರಿಂದ 2,004 ಜನ ಪ್ರಯಾಣಿಸಬಹುದು. ಗಡುವು: ಎಲ್ಲಾ150 ಬೋಗಿಗಳ ಸರಬರಾಜಿಗೆ 2019 ಡಿಸೆಂಬರ್ ಗಡುವು ಹಾಕಿಕೊಳ್ಳಲಾಗಿದೆ. ಬಿಇಎಂಎಲ್‍ನಲ್ಲಿ ಈ ಹಿಂದೆ 2 ಮೆಟ್ರೋ ಬೋಗಿ ತಯಾರಿಕಾ ಘಟಕವಿತ್ತು. ಇತ್ತೀಚೆಗಷ್ಟೇ 3ನೇ ಉತ್ಪಾದನಾ ಘಟಕ ಪ್ರಾರಂಭಿಸಲಾಗಿದೆ. ಪ್ರತಿ ತಿಂಗಳಿಗೆ 6-9 ಬೋಗಿಯಂತೆ ಸರಬರಾಜು ಮಾಡಲು ಸಾದ್ಯವಿದೆ. ಹೀಗಾಗಿ ನಿಗದಿತ ಸಮಯದೊಳಗೇ ಬೋಗಿ ಸರಬರಾಜು ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಾಯೋಗಿಕ ಸಂಚಾರ:

ಬೋಗಿಗಳು ಜನವರಿಯಲ್ಲಿ ಸರಬರಾಜಾದರೂ ಪ್ರಾಯೋಗಿಕ ಸಂಚಾರ ನಡೆಸಿದ ಬಳಿಕವಷ್ಟೇ ಪ್ರಯಾಣಿಕರ ಸೇವೆಗೆ ಬಿಎಂಆರ್ ಸಿಎಲ್ ನೀಡಲಿದೆ.6 ಬೋಗಿ ರೈಲು ನಿಲ್ಲುವಂತಹ ನಿಲ್ದಾಣಗಳನ್ನು ಮೊದಲೇ ವಿನ್ಯಾಸಗೊಳಿಸಲಾಗಿದೆ.

Sri Raghav

Admin