ಮಾರ್ಚ್ 31ರ ನಂತರ ಹಳೇ ನೋಟು ಇಟ್ಟುಕೊಂಡರೆ 4 ವರ್ಷ ಜೈಲು, 5000ರೂ. ದಂಡ..!
ನವದೆಹಲಿ, ಡಿ.28- 500 ಮತ್ತು 1000 ರೂ.ಗಳ ಹಳೇ ನೋಟುಗಳ ವಿರುದ್ಧ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಮಾರ್ಚ್ 31ರ ನಂತರ ಹಳೇ ನೋಟು ಹೊಂದಿರುವವರಿಗೆ 5000 ರೂ.ದಂಡ ಮತ್ತು ನಾಲ್ಕು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲು ತೀರ್ಮಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹಳೆಯ ನೋಟುಗಳ ಬಳಕೆ ವಿರುದ್ಧ ಸುಗ್ರೀವಾಜ್ಞೆ ಜಾರಿಗೊಳಿಸಲು ಒಪ್ಪಿಗೆ ನೀಡಲಾಯಿತು. ಮಾರ್ಚ್ 31ರ ನಂತರ ಹಳೇ ನೋಟುಗಳನ್ನು ಇಟ್ಟುಕೊಳ್ಳುವಂತಿಲ್ಲ. ಈ ನಿಯಮವನ್ನು ಉಲ್ಲಂಘಿಸಿದರೆ ತಪ್ಪಿತಸ್ಥರಿಗೆ 4 ವರ್ಷ ಜೈಲುಶಿಕ್ಷೆ, 5 ಸಾವಿರ ರೂ. ದಂಡ ವಿಧಿಸುವ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಲು ಸಂಪುಟ ಸಭೆ ಸಮ್ಮತಿಸಿದೆ.
ಒಬ್ಬ ವ್ಯಕ್ತಿ 10ಕ್ಕಿಂತ ಹೆಚ್ಚು ಹಳೇ ನೋಟುಗಳನ್ನು ಇಟ್ಟುಕೊಳ್ಳುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ 10 ಪಟ್ಟು ದಂಡ ತೆರಬೇಕಾಗುತ್ತದೆ ಎಂದು ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲು ಸಭೆ ತೀರ್ಮಾನಿಸಿತು. ನಾಣ್ಯ ಸಂಗ್ರಹಗಾರರು ಮತ್ತು ಸಂಶೋಧಕರಿಗೆ ಮಾತ್ರ ಹಳೇ ನೋಟುಗಳನ್ನು ಇಟ್ಟುಕೊಳ್ಳಲು ವಿನಾಯ್ತಿ ನೀಡಲಾಗಿದೆ.