ಮಾರ್ಸ್ ಲ್ಯಾಂಡರ್ ಸ್ಫೋಟ : ಯುರೋಪ್ನ 2ನೇ ಐತಿಹಾಸಿಕ ಪ್ರಯತ್ನ ದುರಂತ ಅಂತ್ಯ
ನವದೆಹಲಿ, ಅ.22- ಮಂಗಳ ಗ್ರಹದ ಮೇಲ್ಮೈ ಮೇಲೆ ಮಹತ್ವದ ಅನ್ವೇಷಣೆ ನಡೆಸುವ ಯುರೋಪ್ನ ಎರಡನೇ ಐತಿಹಾಸಿಕ ಪ್ರಯತ್ನ ದುರಂತ ಅಂತ್ಯ ಕಂಡಿದೆ. ಕೆಂಪುಗ್ರಹದ ಮೇಲ್ಮೈ ಮೇಲೆ ಶಿಯಾಪರೆಲ್ಲಿ ಹೆಸರಿನ ಯೂರೋಪ್ನ ಮಾರ್ಸ್ ಲ್ಯಾಂಡರ್ ನೌಕೆಯು ಭಾರೀ ಆಸ್ಪೋಟನೆಗೆ ಒಳಗಾಗಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ಹೇಳಿದೆ. ನಾಸಾದ ಮಾರ್ಸ್ ರಿಕಾನೈಸ್ಸಾನ್ಸ್ ಆರ್ಬಿಟರ್ (ಎಂಆರ್ಓ) ಹೊಸ ಚಿತ್ರಗಳನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ಕಪ್ಪು ಕಲೆಗಳಿವೆ. ಇದರಿಂದಾಗಿ ಲ್ಯಾಂಡರ್ ನೌಕೆ ಕೆಂಪು ಗ್ರಹದ ಮೇಲ್ಮೈ ಮೇಲೆಯೇ ಸ್ಫೋಟಗೊಂಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕಳೆದ ಎರಡು ದಿನಗಳಿಂದ ಈ ನೌಕೆಯಲ್ಲಿ ತಾಂತ್ರಿಕ ಅಡಚಣೆಗಳು ಕಂಡುಬಂದಿದ್ದರಿಂದ ಈ ಬಗ್ಗೆ ನಿಗಾ ವಹಿಸಿದ್ದ ನಾಸಾ, ಶಿಯಾಪರೆಲ್ಲಿ ಭೀಕರ ರೀತಿಯಲ್ಲಿ ಸ್ಫೋಟಗೊಂಡಿದ್ದು, ಇದರಿಂದ ಮಂಗಳನ ಅನ್ವೇಷಣೆಗೆ ಭಾರೀ ಹಿನ್ನೆಡೆಯಾಗಿದೆ ಎಂದು ತಿಳಿಸಿದೆ. ಭೂಮಿಯಿಮದ 170 ದಶಲಕ್ಷ ಕಿ.ಮೀ.ದೂರದಲ್ಲಿರುವ ಮಂಗಳ ಗ್ರಹದ ಮೇಲೆ ಲ್ಯಾಂಡರ್ ಪ್ಯಾರಾಚೂಟ್ನಲ್ಲಿ ಈ ಕಲೆಗಳು ಕಂಡುಬಂದಿದೆ. ತಾಂತ್ರಿಕ ದೋಷದಿಂದಾಗಿ ಕಾರ್ಯಸ್ಥಗಿತಗೊಳಿಸಿದ ಲ್ಯಾಂಡರ್ ನಂತರ ಭಾರೀ ಸ್ಫೋಟಕ್ಕೆ ಒಳಗಾಗಿದೆ ಎಂಬುದು ವಿಜ್ಞಾನಿಗಳ ವಾದವಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ವಿಜ್ಞಾನಿಗಳು ಕಲೆ ಹಾಕುತ್ತಿದ್ದಾರೆ.