ಮಾಸಿಕ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕರ ತರಾಟೆ

Spread the love

pandavapura

ಪಾಂಡವಪುರ, ಅ.20- ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರೆ ಅಂತಹವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಲ್ಲಾ ಅಧಿಕಾರಿಗಳಿಗೂ ತರಾಟೆಗೆ ತೆಗೆದುಕೊಂಡ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಇನ್ಮುಂದೆ ಸರಿಯಾಗಿ ಕೆಲಸ ಮಾಡುವಂತೆ ತಾಕೀತು ಮಾಡಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ 2016-17ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ (ಕೆಡಿಪಿ) ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು.ಎಲ್ಲೆಲ್ಲಿ ಅಂತರ್ಜಲ ಕುಸಿದಿದೆ ಎಂಬ ಬಗ್ಗೆ ಯಾವೊಬ್ಬ ಅಧಿಕಾರಿಗೂ ಮಾಹಿತಿ ಇಲ್ಲ. ನೀವೇಕೆ ಸರ್ಕಾರಿ ಕೆಲಸ ಮಾಡುತ್ತಿದ್ದೀರಾ. ಸರ್ಕಾರಕ್ಕೂ ಬುದ್ದಿ ಇಲ್ಲ.

ನಿಮ್ಮಂಥ ಅಧಿಕಾರಿಗಳಿಂದ ಅದೇನೂ ಕೆಲಸ ಆಗುತ್ತದೆಯೋ ಗೊತ್ತಿಲ್ಲ. ಇನ್ನು ಕೃಷಿ ಮಂತ್ರಿ ಹಾಗೂ ಕೃಷಿ ವಿಶ್ವವಿದ್ಯಾನಿಲಯಗಳು ರೈತರಿಗೆ ಉಪಯುಕ್ತವಾಗುವ ಬೀಜ ಕಂಡು ಹಿಡಿಯಲು ಪ್ರಯತ್ನಿಸಿಲ್ಲ. ಬಾಳೆಹಣ್ಣು ಬೆಳೆದವರು ನರಳುತ್ತಿದ್ದರೆ, ಬಾಳೆಹಣ್ಣು ತಿಂದವರು ಅರಳುತ್ತಿದ್ದಾರೆ. ನೋಡ್ರಿ ಹೇಗಿದೆ ನಮ್ಮ ದೇಶದ ವ್ಯವಸ್ಥೆ ಎಂದರು.ಕೃಷಿ ಜ್ಞಾನ ಇಲ್ಲದವರು ಆಡಳಿತ ನಡೆಸಿದರೆ ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು.ನರೇಗಾ ಯೋಜನೆ ಮೂಲಕ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ಅಂತರ್ಜಲ ಹೆಚ್ಚಳ ಬಗ್ಗೆ ಒಂದು ನಿರ್ಧಿಷ್ಟ ಕಾರ್ಯಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗೆ ಸೂಚಿಸಿದರು.

ಸಿಡಿಪಿಓಗೆ ತರಾಟೆ:

ಕೆಡಿಪಿ ಸಭೆಗೆ ಸಮಗ್ರ ಮಾಹಿತಿ ನೀಡದ ಸಿಡಿಪಿಒಗೆ ನೋಟೀಸ್ ಜಾರಿ ಮಾಡಿ ಮನೆಗೆ ಕಳುಹಿಸಿ, ಇಲ್ಲಂದ್ರೆ ನಾನೇ ಅವರನ್ನು ವರ್ಗಾವಣೆ ಮಾಡಿಸುತ್ತೇನೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಗುಡುಗಿದರು. ಸಭೆಯಲ್ಲಿ ಸಿಡಿಪಿಓ ಅನ್ನದಾನಿ ಮಾಹಿತಿ ನೀಡಲು ಎದ್ದು ನಿಂತಾಗ, ಸಿಡಿಪಿಓಗೆ ತರಾಟೆಗೆ ತೆಗೆದುಕೊಂಡ ಶಾಸಕರು, ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಬೇರೆಡೆ ಹೋಗಬಹುದು. ಅಥವಾ ನಾನೇ ಮನೆಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಎನ್.ಆಶಾಲತಾ ಮಾಹಿತಿ ನೀಡಿ, ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಲಾಗಿದೆ. ಕ್ಯಾನ್ಸರ್ ಹಾಗೂ ಏಡ್ಸ್ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದಾಗ, ಇದಕ್ಕೆ ಉತ್ತರಿಸಿದ ಶಾಸಕರು, ಪ್ರತಿ ವರ್ಷಕ್ಕೆ ಮೂರು ಬಾರಿ ಬೃಹತ್ ಆರೋಗ್ಯ ಶಿಬಿರ ಆಯೋಜನೆ ಮಾಡಿ, ಜನಪ್ರತಿನಿಧಿಗಳ ಸಹಕಾರ ಪಡೆದುಕೊಂಡು ಉತ್ತಮವಾಗಿ ಕೆಲಸ ಮಾಡಬೇಕುಲ ಎಂದರು.

ಪೌರ ಕಾರ್ಮಿಕರ ಬಡಾವಣೆಗೆ ಭೇಟಿ ನೀಡಿ ವಿಶೇಷ ಆರೋಗ್ಯ ಶಿಬಿರ ನಡೆಸಬೇಕು. ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳ ಪಟ್ಟಿ ನನಗೆ ನೀಡಿ ನಾನು ಆರೋಗ್ಯ ಸಚಿವರಿಂದ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದರು. ಸಭೆಯಲ್ಲಿ ಇನ್ನುಳಿದ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖೆಗೆ ಸಂಬಂಧಪಟ್ಟಂತೆ ಮಾಹಿತಿ ನೀಡಿದರು.ತಾಪಂ ಅಧ್ಯಕ್ಷೆ ರಾಧಮ್ಮ, ಇಓ ಮಂಜುನಾಥಸ್ವಾಮಿ, ಜಿ.ಪಂ ಸದಸ್ಯರಾದ ಎಚ್.ತ್ಯಾಗರಾಜು, ತಿಮ್ಮೇಗೌಡ, ಅನುಸೂಯ, ಶಾಂತಲಾ, ತಾ.ಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin