ಮುಂಗಾರಿನ ಮುನ್ಸೂಚನೆ ಕೂಡ ಆಶಾದಾಯಕವಾಗಿಲ್ಲ, ವಾಡಿಕೆಯಷ್ಟೂ ಮಳೆಯಾಗುವುದು ಅನುಮಾನ

farmers--rain

ಬೆಂಗಳೂರು, ಏ.30-ನೈಋತ್ಯ ಮುಂಗಾರು ಮಳೆ ಬಗ್ಗೆ ಭಿನ್ನವಾದ ದೀರ್ಘ ಕಾಲದ ಹವಾ ಮುನ್ಸೂಚನೆಗಳು ಹೊರಬಿದ್ದಿವೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ವಾಡಿಕೆಯ ಪ್ರಮಾಣದ ಮಳೆಯಾಗಲಿದೆ. ಆದರೆ ದಕ್ಷಿಣ ಏಷ್ಯಾದ 8 ರಾಷ್ಟ್ರಗಳ ಒಪ್ಪಿತವಾದ ಹವಾ ಮುನ್ಸೂಚನೆ ಪ್ರಕಾರ ಕರ್ನಾಟಕ, ತಮಿಳುನಾಡು ಸೇರಿದಂತೆ ರಾಷ್ಟ್ರದ ಹಲವು ರಾಜ್ಯಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಗಳಿವೆ. ಭೂತಾನ್‍ನಲ್ಲಿ ಏ.24ರಿಂದ 26ರವರೆಗೆ ನಡೆದ ದಕ್ಷಿಣ ಏಷ್ಯಾದ ಎಂಟು ರಾಷ್ಟ್ರಗಳ ಹವಾಮಾನ ತಜ್ಞರ ಸಭೆಯಲ್ಲಿ ಈ ಬಾರಿಯ ಮುಂಗಾರು ಮಳೆಯ ಮುನ್ಸೂಚನೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಮಳೆ ಕೊರತೆ ಉಂಟಾಗುವ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ಈ ಸಂಜೆಗೆ ತಿಳಿಸಿದರು.ಭಾರತ, ಶ್ರೀಲಂಕಾ, ಮಾಲ್ಡೀವ್ಸ್, ಬಾಂಗ್ಲಾ, ನೇಪಾಳ, ಪಾಕಿಸ್ತಾನ, ಆಫ್ಘಾನಿಸ್ತಾನ, ಮೊಕಾನ್ ರಾಷ್ಟ್ರಗಳ ಹವಾಮಾನ ತಜ್ಞರು ಮುಂಗಾರು ಹಂಗಾಮಿನ ಹವಾ ಮುನ್ಸೂಚನೆ ಬಗ್ಗೆ ಚರ್ಚೆ ನಡೆಸಿ ಹೊರ ಹಾಕಿರುವ ಫಲಿತಾಂಶದ ಪ್ರಕಾರ ಕೇರಳ ರಾಜ್ಯದಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಲಿದೆ.  ಆದರೆ ಕರ್ನಾಟಕಕ್ಕೆ ಹೊಂದಿಕೊಂಡಿರುವ ತಮಿಳುನಾಡು ಭಾಗದಲ್ಲಿ ವಾಡಿಕೆಗಿಂತ ಶೇ.40ರಷ್ಟು ಮಳೆ ಕೊರತೆ ಉಂಟಾಗುವ ಸಾಧ್ಯತೆ ಇದೆ. ಕರ್ನಾಟಕದ ಕರಾವಳಿ ಮತ್ತು ಪಶ್ಚಿಮ ಘಟ್ಟದಲ್ಲೂ ಮಳೆ ಕೊರತೆ ಉಂಟಾಗುವ ಸಾಧ್ಯತೆಗಳಿವೆ. ಅದೇ ರೀತಿ ರಾಜಸ್ಥಾನ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಉತ್ತರಪ್ರದೇಶ ಪೂರ್ವಭಾಗದಲ್ಲಿ ಮಳೆ ಕೊರತೆ ಉಂಟಾಗಲಿದ್ದು, ಉಳಿದಂತೆ ವಾಡಿಕೆ ಪ್ರಮಾಣದ ಮಳೆಯಾಗಲಿದೆ.
ತಮಿಳುನಾಡಿಗೆ ಹೊಂದಿಕೊಂಡಿರುವ ಬೆಂಗಳೂರು, ರಾಮನಗರ, ಚಾಮರಾಜನಗರ, ಮೈಸೂರು ಹಾಗೂ ಕೋಲಾರ ಜಿಲ್ಲೆಗಳಲ್ಲೂ ಮಳೆ ಕೊರತೆಯಾಗುವ ಮುನ್ಸೂಚನೆಗಳು ಕಂಡುಬಂದಿವೆ ಎಂದು ಹೇಳಿದರು.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ವಾಡಿಕೆ ಪ್ರಮಾಣದ ಮಳೆಯಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ ತಿಳಿಸಿದರು.   ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಗಳಿಲ್ಲ. ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆ ಕೊರತೆ ಉಂಟಾಗುವುದನ್ನು ನಿರೀಕ್ಷಿಸಿದ್ದರೂ ನಿರ್ದಿಷ್ಟವಾಗಿ ಇಂತಹ ಪ್ರದೇಶವೆಂದು ಹವಾ ಮುನ್ಸೂಚನೆಯಲ್ಲಿ ತಿಳಿಸಿಲ್ಲ.  ಸತತ ಎರಡು ಮೂರು ವರ್ಷಗಳಿಂದ ಬರದ ಛಾಯೆಗೆ ಸಿಲುಕಿ ನಲುಗಿರುವ ರಾಜ್ಯದಲ್ಲಿ ಈ ವರ್ಷ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆ ನಿರೀಕ್ಷಿಸಲಾಗಿದೆ. ಆದರೂ ಕೂಡ ಹವಾಮಾನ ತಜ್ಞರು ಸಹಮತ ವ್ಯಕ್ತಪಡಿಸಿಲ್ಲ.

ಉತ್ತರ ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಸದ್ಯಕ್ಕೆ ಸ್ಥಿರವಾಗಿರುವ ಎಲ್‍ನಿನೋ ಸೆಪ್ಟೆಂಬರ್ ನಂತರ ಕ್ರಿಯಾಶೀಲವಾಗುವ ಸಾಧ್ಯತೆಗಳಿದ್ದು, ಈಶಾನ್ಯ ಮಾರುತಗಳ ಆಧರಿಸಿದ ಮಳೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin