ಮುಂಗಾರು ಪೂರ್ವ ಮಳೆಗೆ ಚಿತ್ ಆದ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ, ಮೇ 21- ತಾಲ್ಲೂಕಿನಲ್ಲಿ ನಿನ್ನೆ ರಾತ್ರಿ ಬಿರುಗಾಳಿ ಸಹಿತ ಗುಡುಗು ಸಿಡಿಲಿನ ಭಾರೀ ಮಳೆಗೆ ನಗರದ ಬಹುತೇಕ ಕಡೆ ಮರ, ವಿದ್ಯುತ್ಕಂಬಗಳು ನೆಲಕ್ಕುರುಳಿ ಲಕ್ಷಾಂತರ ರೂ. ಆಸ್ತಿಪಾಸ್ತಿ ನಷ್ಟವುಂಟಾಗಿದೆ. ಸುರಿದ ಒಂದೇ ದಿನದ ಮಳೆಗೆ ಚಿಕ್ಕಬಳ್ಳಾಪುರ ಚಿತ್ತಾಗಿದೆ. ನಗರದ ರಸ್ತೆಗಳು ಜಲಾವೃತಗೊಂಡಿದ್ದವು. ತಗ್ಗಿನ ಪ್ರದೇಶಗಳಿಗೆ ನೀರು ನುಗ್ಗಿ ಜನ ರಾತ್ರಿಯೆಲ್ಲಾ ಜಾಗರಣೆ ಮಾಡಬೇಕಾಯಿತು. ಭಾರೀ ಗಾತ್ರದ ಮರಗಳು ಧರೆಗುರುಳಿದ್ದರಿಂದ ಮತ್ತು ವಿದ್ಯುತ್ ಕಡಿತಗೊಂಡಿದ್ದರಿಂದ ಆತಂಕದಲ್ಲಿ ಜನ ರಾತ್ರಿ ಕಳೆದರು.
ವಾಹನಗಳು ಜಖಂ:
ನಗರಸಭೆಯ ಆವರಣದಲ್ಲಿನ ಬೃಹದಾಕಾರದ ಮರವೊಂದು ಬಿರುಗಾಳಿಗೆ ನೆಲಕ್ಕುರುಳಿದ ಪರಿಣಾಮ ಆವರಣದಲ್ಲಿ ನಿಲ್ಲಿಸಲಾಗಿದ್ದ ಒಂದು ಜೆ.ಸಿಬಿ, 3 ಟ್ರಾಕ್ಟರ್, 3 ಟಾಟಾ ಏಸ್ ಆಟೋ, ಒಂದು ದ್ವಿಚಕ್ರವಾಹನ ಸೇರಿದಂತೆ ಹಲವಾರು ವಾಹನಗಳು ಜಖಂಗೊಂಡಿವೆ. ನಗರಸಭೆ ವ್ಯಾಪ್ತಿಯ ಕಸವಿಲೇವಾರಿ ಮಾಡುವ ವಾಹನಗಳೆಲ್ಲಾ ಜಖಂಗೊಂಡ ಹಿನ್ನಲೆಯಲ್ಲಿ ತಕ್ಷಣಕ್ಕೆ ಈ ವ್ಯಾಪ್ತಿಯ ಕಸ ವಿಲೇವಾರಿಗೂ ತೊಡಕುಂಟಾಗಿದೆ.
ಇನ್ನು ನಗರದ ಸಿಎಸ್ಐ ಆಸ್ಪತ್ರೆಯ ಆವರಣದ ಕಾಂಪೌಂಡಿಗೆ ಹೊಂದಿಕೊಂಡಿದ್ದ ಮರವೊಂದು ನೆಲಕ್ಕುರುಳಿದ ಪರಿಣಾದ ಸನಿಹದಲ್ಲಿಯೇ ಹಾಯ್ದು ಹೋಗಿದ್ದ ವಿದ್ಯುತ್ಕಂಬ ಧರೆಗುರುಳಿದಿದೆ, ಇದರಿಂದಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲೂ ಸಹಾ ವಿದ್ಯುತ್ ಸ್ಥಗಿತಗೊಂಡಿತ್ತು.
ನಿಮಾಕಲಕುಂಟೆಯ ಜಿ.ಕೆ.ವೆಂಕಟರಮಣ ಅವರ ಮನೆ ಮೇಲೆ ಮರ ಬಿದ್ದು ತೀವ್ರಹಾನಿಯಾಗಿದೆ. ನಗರದ 7ನೇ ಮತ್ತು 17ನೇ ವಾರ್ಡಿನಲ್ಲಿ ಎರಡು ಮನೆಗಳು ಬಿರುಗಾಳಿಗೆ ಧರೆಗುರುಳಿವೆ.
ಶಿಡ್ಲಘಟ್ಟ ರಸ್ತೆಯ ರಾಷ್ಟ್ರೀಯ ಹೆದ್ದಾರಿ 7ರ ಮೇಲ್ಸೇತುವೆ ಕೆಳಗೆ ಮೂರು ಅಡಿಗೂ ಹೆಚ್ಚು ನೀರು ರಸ್ತೆಯಲ್ಲಿಯೇ ಹರಿದು ಹೋದ ಪರಿಣಾಮ ವಾಹನ ಸವಾರರು ಗಂಟೆಗಟ್ಟಲೆ ಹಾದು ಹೋಗಲು ಹರಸಾಹಸ ಪಡಬೇಕಾಯಿತು. ನಗರದ ಹೊಸ ಸರ್ಕಾರಿ ಆಸ್ಪತ್ರೆ, ಸೆಂಟ್ಜೊಸೆಫ್ ಕಾನ್ವೆಂಟ್ ಹಿಂಭಾಗ, ರೇಷ್ಮೆಗೂಡಿನ ಮಾರುಕಟ್ಟೆ, ಸಾಧುಮಠ ರಸ್ತೆಯ ಈ ತಗ್ಗುಪ್ರದೇಶಗಳಿಗೆ ನುಗ್ಗಿದ ನೀರಿನಿಂದ ಜನರು ಆಂತಕದಿಂದ ರಾತ್ರಿ ಕಳೆಯಬೇಕಾಯಿತು.
ಚರಂಡಿ ಇಲ್ಲದೆ ರಸ್ತೆಗೆ ನುಗ್ಗಿದ ನೀರು:
ನಗರದ ಬಹುತೇಕ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿರದ ಕಾರಣ ಮಳೆಬಂತೆಂದರೆ ನಗರ ಪ್ರದೇಶದ ಬಹುತೇಕ ಜನತೆ ಉಸಿರು ಬಿಗಿಹಿಡಿದು ಓಡಾಡಬೇಕಾದ ಅನಿವಾರ್ಯ ಇದೆ. ರಸ್ತೆಗೆ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಗೆ ನೀರು ಹರಿಯುತ್ತಿರುವ ಕಾರಣ ವಾಹನ ಸವಾರರು ಪರದಾಡಬೇಕಾದ ಅನಿವಾರ್ಯ ಉಂಟಾಗಿದೆ. ಅನೇಕ ಮನೆಗಳ ಜಿಂಕ್ ಶೀಟ್ಗಳು ಬಿರುಗಾಳಿಗೆ ಹಾರಿದ ಪರಿಣಾಮ ಹಲವೆಡೆ ನಷ್ಟವುಂಟಾಗಿದೆ. ಬಿರುಗಾಳಿ ಸಹಿತ ಮಳೆ ಆರ್ಭಟ ಆರಂಭವಾಗುತ್ತಿದ್ದಂತೆ ನಗರಸಭೆ ಆಯುಕ್ತ ಉಮಾಕಾಂತ್ ಮತ್ತು ನಗರ ಪೊಲೀಸರು ಹಾನಿಗೊಳಗಾದ ಪಗ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಆಲಿಕಲ್ಲು ಮಳೆಗೆ ಪಾಲಿಹೌಸ್ಗೆ ಹಾನಿ:
ತಾಲ್ಲೂಕಿನಲ್ಲಿ ನಿನ್ನೆ ಸುರಿದ ಆಲಿಕಲ್ಲು ಮಳೆಗೆ ಕಣೀಜೇನಹಳ್ಳಿ ಕೆ.ಜೆ.ಶ್ರೀನಿವಾಸ್ ಎಂಬುವರಿಗೆ ಸೇರಿದ ತೋಟದಲ್ಲಿ ಸುಮಾರು 25 ಲಕ್ಷ ರೂ.ಗಳಲ್ಲಿ ನಿರ್ಮಾಣಗೊಂಡಿದ್ದ ಫಾಲೀಹೌಸ್ ತೀವ್ರ ಹಾನಿಗೊಳಗಾಗಿದೆ ದೊಡ್ಡ ಮೆಣಸಿನಕಾಯಿ ಬೆಳೆ ಬೆಳೆಯಲು ಬ್ಯಾಂಕ್ ಹಾಗೂ ಇನ್ನಿತರೆ ಕಡೆ 25 ಲಕ್ಷ ರೂ. ಸಾಲ ಮಾಡಿ ಪಾಲಿಹೌಸ್ ನಿರ್ಮಾಣ ಮಾಡಿದ್ದರು. ನಿನ್ನೆ ರಾತ್ರಿ ದೈತ್ಯಾಕಾರವಾಗಿ ಬಂದೆರೆಗಿದ ಆಲಿಕಲ್ಲು ಹಾಗೂ ಬಿರುಗಾಳಿ ಸಹಿತ ಮಳೆಗೆ ಪಾಲ್ಹೌಸ್ನ ಪ್ಲ್ಯಾಸ್ಟಿಕ್ ಹೊದಿಕೆ ಸಂಪೂರ್ಣ ನಾಶವಾಗಿದೆ. ಅದೃಷ್ಟವಶಾತ್ ಬೆಳೆ ಇಟ್ಟಿಲ್ಲವಾದ್ದರಿಂದ ಬೆಳೆ ಹಾನಿಯಾಗಿಲ್ಲ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
ಭಾರೀ ಮಳೆಗೆ ರೈತರು ಸಿಕ್ಕಿ ನಲುಗುತ್ತಿದ್ದು, ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳಿಗೆ ಸಂಪರ್ಕಿಸಿದರೂ ಸಹಾ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ.
ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಬಹುತೇಕ ಅಧಿಕಾರಿಗಳು ಕೇಂದ್ರ ಸ್ಥಾನಗಳಲ್ಲಿ ಇರುವುದಿಲ್ಲ, ಹೀಗಾಗಿ ಸಾರ್ವಜನಿಕರು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳಲೂ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >