ಮುಂದಿನ ದಿನಗಳಲ್ಲಿ ಗೃಹ ಮಂಡಳಿಯಿಂದ 20 ಸಾವಿರ ನಿವೇಶನ ಅಭಿವೃದ್ಧಿ

Home--01

ಬೆಂಗಳೂರು, ಮೇ 3- ಕಳೆದ 6 ತಿಂಗಳಲ್ಲಿ 6500 ನಿವೇಶನ, 872 ಮನೆಗಳನ್ನು ಹಂಚಿಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಸುಮಾರು 20 ಸಾವಿರ ನಿವೇಶನಗಳನ್ನು ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈವರೆಗೆ 1146 ವಸತಿ ಯೋಜನೆಗಳಿಂದ 1,18,154 ಮನೆಗಳು, 67,343 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಬೆಂಗಳೂರಿನ ಯಲಹಂಕ, ಕೆಂಗೇರಿ, ರಾಷ್ಟ್ರೀಯ ಕ್ರೀಡಾಗ್ರಾಮ, ಸೂರ್ಯನಗರ, ಮೈಸೂರಿನ ಹೂಟಗಳ್ಳಿ, ವಿಜಯಪುರ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಮತ್ತಿತರ ಕಡೆ ನಿವೇಶನಗಳು, ಮನೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.2010-11ನೆ ಸಾಲಿನಲ್ಲಿ 225 ಯೋಜನೆಗಳು ಮತ್ತು 100 ವಸತಿ ಯೋಜನೆಗಳಡಿ 50 ಯೋಜನೆಗಳು ಚಾಲ್ತಿಯಲ್ಲಿದ್ದು, ಅವುಗಳಲ್ಲಿ 196 ಯೋಜನೆ ಪೂರ್ಣಗೊಂಡಿದೆ. 60, 169 ನಿವೇಶನಗಳನ್ನು 8,549 ಮನೆಗಳನ್ನು ಸರ್ಕಾರದಿಂದ 770 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 36 ಯೋಜನೆಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.ಸಣ್ಣಪುಟ್ಟ ತಕರಾರುಗಳಿಂದಾಗಿ ಬಂದಿರುವ ತಡೆಯಾಜ್ಞೆಗಳು ಇತ್ಯರ್ಥಗೊಂಡರೆ ಇನ್ನು 6 ತಿಂಗಳಲ್ಲಿ 20 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಗೃಹ ಮಂಡಳಿ ಸಿದ್ದವಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರ ಸರ್ಕಾರ 4 ವರ್ಷದಲ್ಲಿ 23,199 ನಿವೇಶನಗಳು, 2856 ಮನೆಗಳನ್ನು ಹಂಚಿಕೆ ಮಾಡಿದೆ. ನೋಟು ನಿಷೇಧದ ನಂತರ ಶೇ.10ರಷ್ಟು ರಿಯಾಯಿತಿ ನೀಡಲಾಗಿದೆ. ಮನೆ ಅಥವಾ ನಿವೇಶನದ ಮೊತ್ತವನ್ನು ಪಾವತಿಸಲು ನಾಲ್ಕು ಸುಲಭ ಕಂತುಗಳ ಅವಕಾಶ ಮಾಡಿಕೊಡಲಾಗುತ್ತದೆ ಎಂದರು.
ಗೃಹ ಮಂಡಳಿ ನಿವೇಶನ ಅಭಿವೃದ್ಧಿಗಾಗಿ ಖಾಸಗಿಯವರಿಂದ ಭೂಮಿ ಖರೀದಿಸುವುದಿಲ್ಲ. ಶೇ.60:40ರ ಅನುಪಾತದಲ್ಲಿ ಪಾಲುಗಾರಿಕೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಬಿಡಿಎ, ಬಿಬಿಎಂಪಿ ವ್ಯಾಪ್ತಿಯಲ್ಲಿ ಗೃಹಮಂಡಳಿಗೆ ಶೇ.60ರಷ್ಟು ಜಮೀನು, ಮಾಲೀಕರಿಗೆ ಶೇ.40ರಷ್ಟು ಅಭಿವೃದ್ಧಿಪಡಿಸಿದ ನಿವೇಶನ ಹಂಚಿಕೆಯಾಗುತ್ತದೆ. ಉಳಿದಂತೆ ಶೇ.65:35ರ ಅನುಪಾತದಲ್ಲಿ ನಿವೇಶನ ಹಂಚಿಕೆಯಾಗುತ್ತದೆ ಎಂದು ತಿಳಿಸಿದರು.

ನಗರಾಭಿವೃದ್ಧಿ ಇಲಾಖೆ ಶೇ.50-50ರ ದರದಲ್ಲಿ ನಿವೇಶನ ಹಂಚಿಕೆ ಮಾಡುತ್ತಿದ್ದು, ಅದೇ ಸೂತ್ರವನ್ನು ಅನುಸರಿಸಲು ನಮ್ಮ ಮಂಡಳಿ ಚಿಂತನೆ ನಡೆಸಿದೆ ಎಂದು ಹೇಳಿದರು.ಕೇಂದ್ರ ಸರ್ಕಾರ ರಿಯಲ್ ಎಸ್ಟೇಟ್ ಕಾಯ್ದೆಗೆ ತಿದ್ದುಪಡಿ ತಂದ ನಂತರ ನಕಲಿ ಕಂಪೆನಿಗಳು ಅಸ್ತಿತ್ವ ಕಳೆದುಕೊಳ್ಳಲಿದ್ದು ಗೃಹ ಮಂಡಳಿ ಮೇಲೆ ವಿಶ್ವಾಸ ಹಚ್ಚಾಗಲಿದೆ. ಅದನ್ನು ಮನಸ್ಸಲ್ಲಿಟ್ಟುಕೊಂಡು ನಾವು ಯೋಜನೆ ರೂಪಿಸುತ್ತಿದ್ದೇವೆ ಎಂದರು.ಸೂರ್ಯನಗರ ಬಡಾವಣೆಗೆ 85 ಕೋಟಿ ರೂ. ಖರ್ಚು ಮಾಡಿ ಕಾವೇರಿ ನೀರು ಸೌಲಭ್ಯ ಒದಗಿಸಲಾಗುತ್ತಿದೆ. ಈಗಾಗಲೇ ಬಿಡದಿಯಲ್ಲಿ ನಾಲ್ಕು ಸಾವಿರ, ಚಂಚಲನಗೂಡಿನಲ್ಲಿ 2 ಸಾವಿರ, ರಾಯಸಂದ್ರ, ಬೈರಾಳು ಮತ್ತಿತರೆಡೆ ನಿವೇಶನಗಳು ಹಂಚಿಕೆಗೆ ಸಿದ್ಧವಾಗಿವೆ ಎಂದು ಮಾಲೀಕಯ್ಯ ಗುತ್ತೇದಾರ್ ತಿಳಿಸಿದರು. ಗೃಹಮಂಡಳಿ ಆಯುಕ್ತ ಎ.ಬಿ.ಇಬ್ರಾಹಿಂ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin