ಮುಂದಿನ ಬಜೆಟ್‍ನಲ್ಲಿ ಬೇಡಿಕೆ ಇರುವ ಕಡೆ ಪೊಲೀಸ್ ಠಾಣೆಗಳ ಸ್ಥಾಪನೆ

Parameshwar-Session

ಬೆಳಗಾವಿ, ನ.29- ಈ ವರ್ಷ ಹೊಸ ಪೊಲೀಸ್ ಠಾಣೆ ಮತ್ತು ಅಗ್ನಿ ಶಾಮಕ ಠಾಣೆ ಸ್ಥಾಪನೆಯ ಯೋಜನೆಗಳು ಮುಗಿದಿವೆ. ಮುಂದಿನ ಬಜೆಟ್‍ನಲ್ಲಿ ಬೇಡಿಕೆ ಇರುವ ಕಡೆ ಠಾಣೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು. ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಶಿಡ್ಲಘಟ್ಟ ಶಾಸಕ ಎಂ.ರಾಜಣ್ಣ ಅವರು ತಮ್ಮ ಕ್ಷೇತ್ರದ ಜಂಗಮಕೋಟೆ ಕ್ರಾಸ್ ಬಳಿ ಇರುವ ಪೊಲೀಸ್ ಉಪ ಠಾಣೆಯನ್ನು ಮೇಲ್ದರ್ಜೆಗೇರಿಸಲು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ರಾಷ್ಟ್ರೀಯ ಪೊಲೀಸ್ ಆಯೋಗದ ಶಿಫಾರಸ್ಸಿನ ಪ್ರಕಾರ ಉಪ ಠಾಣೆಯನ್ನು ಮೇಲ್ದೆರ್ಜೆಗೇರಿಸಲು ಆ ಪ್ರದೇಶ ವಿಸ್ತೀರ್ಣ ಕನಿಷ್ಠ 150 ಚದರ ಕಿ.ಮೀ. ಇರಬೇಕು. 300 ಅಪರಾಧ ಪ್ರಕರಣಗಳು ದಾಖಲಾಗಬೇಕು, 50ರಿಂದ 60ಸಾವಿರ ಜನಸಂಖ್ಯೆ ಇರಬೇಕು. ಜಂಗಮಕೋಟೆ ಕ್ರಾಸ್‍ನ ಉಪ ಠಾಣೆ ಈ ಮಾನದಂಡದ ಒಳಗೆ ಬರುತ್ತಿಲ್ಲ. ಮಾನದಂಡಗಳನ್ನು ಪೂರೈಸಿದಾಗ ಮೇಲ್ದರ್ಜೆಗೇರಿಸುವುದಾಗಿ ತಿಳಿಸಿದರು.

ಬಸವನಬಾಗೇವಾಡಿ ಶಾಸಕ ಶಿವಾನಂದ ಎಸ್. ಪಾಟೀಲ್ ಅವರು ಪ್ರಶ್ನೆ ಕೇಳಿ, ನಮ್ಮ ಕ್ಷೇತ್ರದಲ್ಲಿ ಅಗ್ನಿ ಶಾಮಕ ಠಾಣೆ ಸ್ಥಾಪನೆಗೆ ಸಾಕಷ್ಟು ಜಾಗ ಇದೆ. ಆದರೂ ಈವರೆಗೂ ಅಗ್ನಿ ಶಾಮಕ ಠಾಣೆ ಸ್ಥಾಪನೆಯಾಗಿಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಕಳೆದ ವರ್ಷ ಮಂಜೂರಾದ ಎಲ್ಲಾ ಠಾಣೆಗಳನ್ನು ಹಂಚಿಕೆ ಮಾಡಲಾಗಿದೆ. ಮುಂದಿನ ಬಜೆಟ್‍ನಲ್ಲಿ ಹೊಸ ಅಗ್ನಿಶಾಮಕ ಠಾಣೆಗಳ ಸ್ಥಾಪನೆಗೆ ಅಂಗೀಕಾರ ಪಡೆದು ಬಸವನಬಾಗೇವಾಡಿಯಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಶಾಸಕ ಅಪ್ಪಾಜಿ ನಾಡಗೌಡ ಅವರು ತಮ್ಮ ಮುದ್ದೆಬಿಹಾಳ ಕ್ಷೇತ್ರದಲ್ಲಿ ಪೊಲೀಸ್ ವಸತಿ ಗೃಹಗಳಿಲ್ಲದೆ ತೊಂದರೆಯಾಗುತ್ತಿರುವ ಬಗ್ಗೆ ಗಮನ ಸೆಳೆದಾಗ ಉತ್ತರಿಸಿದ ಸಚಿವರು, 1818 ಕೋಟಿ ರೂ. ವೆಚ್ಚದಲ್ಲಿ 3 ಹಂತದಲ್ಲಿ 11 ಸಾವಿರ ವಸತಿ ಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ವಸತಿ ಗೃಹಗಳ ದುರಸ್ತಿಗೆ 50ರಿಂದ60 ಕೋಟಿ ಹಣ ಖರ್ಚು ಮಾಡಲಾಗುತ್ತಿದೆ. ಮೂರನೇ ಹಂತದಲ್ಲಿ ಮುದ್ದೆಬಿಹಾಳ ಕ್ಷೇತ್ರಕ್ಕೆ ಅಗತ್ಯವಾದ ಪೊಲೀಸ್ ವಸತಿ ಗೃಹ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin