ಮುಂದಿನ 3 ತಿಂಗಳೊಳಗೆ ಪ್ರತಿ ತಾಲೂಕಿಗೊಂದು ಡಯಾಲಿಸಿಸ್ ಕೇಂದ್ರ

Dyalisis--0

ಬೆಂಗಳೂರು, ಮಾ. 23– ರಾಜ್ಯದಲ್ಲಿ ತಾಲೂಕಿಗೊಂದರಂತೆ ಡಯಾಲಿಸಿಸ್ ಕೇಂದ್ರಗಳನ್ನು ಮುಂದಿನ ಮೂರು ತಿಂಗಳೊಳಗಾಗಿ ಆರಂಭಿಸಲು ಕ್ರಮಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್ ಭರವಸೆ ನೀಡಿದರು. ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಕೋನರೆಡ್ಡಿ ಅವರು ಪ್ರಶ್ನೆ ಕೇಳಿ ಮೂತ್ರಪಿಂಡ ವೈಫಲ್ಯದಿಂದ ಬಳಲು ತ್ತಿರುವ ರೋಗಿಗಳಿಗೆ ಚಿಕಿತ್ಸೆ ಪಡೆಯಲು ತೊಂದರೆಯಾಗಿದೆ. ತಾಲೂಕಿಗೆ ಒಂದರಂತೆ ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸಬೇಕು. ಬಡ ರೋಗಿ ಗಳು ಚಿಕಿತ್ಸೆ ಪಡೆಯಲು ಸಮಸ್ಯೆಯಾಗು ತ್ತಿದೆ ಎಂದು ಗಮನ ಸೆಳೆದರು.

ಇದಕ್ಕೆ ಉತ್ತರ ನೀಡಿದ ರಮೇಶ್‍ಕುಮಾರ್ ಅವರು, ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಒಂದೊಂದು ತಾಲೂಕು ಆಸ್ಪತ್ರೆಯಲ್ಲಿ ತಲಾ ಒಂದರಂತೆ ಡಯಾಲಿಸಿಸ್ ಯಂತ್ರಗಳನ್ನು ಒದಗಿಸಲಾಗಿದೆ. ಇನ್ನು 114 ತಾಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ಈ ವರ್ಷದ ಬಜೆಟ್‍ನಲ್ಲಿ ಘೋಷಿಸಲಾಗಿದೆ.   ಚಿಕಿತ್ಸೆ ವಿಷಯದಲ್ಲಿ ಸರ್ಕಾರದ ವೈಯಕ್ತಿಕ ಅನುಭವ ಚೆನ್ನಾಗಿಲ್ಲ. ಡಯಾಲಿಸಿಸ್ ಯಂತ್ರ ಕೆಟ್ಟು ಹೋದರೆ ಡಯಾಲಿಸಿಸ್ ಅರ್ಧಕ್ಕೆ ನಿಂತುಹೋಗಬಾರದು. ಹೀಗಾಗಿ ಖಾಸಗಿ ಸಹಭಾಗಿತ್ವದಲ್ಲಿ ತಾಲೂಕಿಗೆ ಒಂದರಂತೆ ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ.

ಸರ್ಕಾರ ಖಾಸಗಿ ಸಂಸ್ಥೆಗಳಿಗೆ ಹಣ ನೀಡಿ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಅನಿರ್ಬಂಧಿತ ಸೇವೆ ಒದಗಿಸಲು ಕ್ರಮಕೈಗೊಳ್ಳುತ್ತಿದೆ. ಆರಂಭದಲ್ಲಿ ತಾಲೂಕಿಗೆ ಒಂದ ರಂತೆ ಈ ಯಂತ್ರಗಳನ್ನು ಅಳವಡಿಸ ಲಾಗುವುದು. ತಾಲೂಕು ದೊಡ್ಡ ದಾಗಿದ್ದರೆ ಒಂದಕ್ಕಿಂತ ಹೆಚ್ಚು ಯಂತ್ರ ಗಳನ್ನು ಅಳವಡಿಸಲಾಗುವುದು ಎಂದರು.  ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋನರೆಡ್ಡಿ ಅವರು, ಮೂರು ವರ್ಷದಿಂದಲೂ ಸರ್ಕಾರ ತಾಲೂಕಿಗೆ ಒಂದರಂತೆ ಡಯಾಲಿಸಿಸ್ ಕೇಂದ್ರ ಆರಂಭಿಸುವದಾಗಿ ಹೇಳುತ್ತಲೇ ಬಂದಿದೆ. ಅನುಷ್ಠಾನಕ್ಕೆ ಬಂದಿಲ್ಲ. ಟೆಂಡರ್ ಕರೆಯುವ, ಕೆಲಸ ಮಾಡುವ ಮನಸ್ಸು ಸರ್ಕಾರಕ್ಕಿಲ್ಲ. ಹೀಗಾಗಿ ಕಿಡ್ನಿ ರೋಗಿಗಳಿಗೆ ತೊಂದರೆ ಯಾಗಿದೆ ಎಂದು ಹೇಳಿದರು. ಸರ್ಕಾರಕ್ಕೆ ಯಾವುದೇ ಹಿಂಜರಿಕೆಯೂ ಇಲ್ಲ. ಜನರಿಗೆ ತೊಂದರೆಯಾಗದಂತೆ ಅಗತ್ಯ ಸೇವೆ ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಸಚಿವ ರಮೇಶ್‍ಕುಮಾರ್ ಭರವಸೆ ನೀಡಿದರು.

ತುರ್ತು ಎಕ್ಸ್‍ಟೆನ್ಷನ್ ಕ್ಲಿನಿಕ್:ರಮೇಶ್‍ಕುಮಾರ್ : 

ಬೆಂಗಳೂರು, ಮಾ. 23-ಆರೋಗ್ಯ ಸೇವೆ ತಲುಪದೇ ಇರುವ ಕಡೆಗೆ ತುರ್ತಾಗಿ ಎಕ್ಸ್‍ಟೆನ್ಷನ್ ಕ್ಲಿನಿಕ್‍ಗಳನ್ನು ಆರಂಭಿಸಲು ಸರ್ಕಾರ ಕ್ರಮಕೈಗೊಂಡಿದೆ. ಹೀಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಗತ್ಯವಿರುವೆಡೆ ತುರ್ತು ಆರೋಗ್ಯ ಕೇಂದ್ರ ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್ ಹೇಳಿದ್ದಾರೆ.  ವಿಧಾನಸಭೆಯಲ್ಲಿ ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಅವರು, ತಮ್ಮ ಕ್ಷೇತ್ರಕ್ಕೆ ಜನಸಂಖ್ಯೆ ಆಧಾರದ ಮೇಲೆ ಏಳು ಪ್ರಾಥಮಿಕ ಆರೋಗ್ಯಕೇಂದ್ರಗಳನ್ನು ಒದಗಿಸಬೇಕಿತ್ತು. ಆದರೆ ಮಂಜೂರಾದ ಆರೋಗ್ಯ ಕೇಂದ್ರಗಳನ್ನು ಹಿಂಪಡೆಯಲಾಗಿದೆ. ತುರ್ತಾಗಿ 2 ಕೇಂದ್ರಗಳನ್ನು ಆರಂಭಿಸಲು ಅವಕಾಶ ನೀಡಿ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, 30 ಸಾವಿರ ಜನಸಂಖ್ಯೆಗೆ ಒಂದು, ಬುಡಕಟ್ಟು ಜನಾಂಗದವರಿರುವ ಕಡೆ 20 ಸಾವಿರ ಜನಸಂಖ್ಯೆಗೆ ಒಂದು ಆರೋಗ್ಯ ಕೇಂದ್ರ ಆರಂಭಿಸಬೇಕು ಎಂಬ ನಿಯಮವಿದೆ.ಇನ್ನು ಉತ್ತರ ಕರ್ನಾಟಕ, ಹೈದರಾಬಾದ್-ಕರ್ನಾಟಕದಲ್ಲಿ ಜಾರಿಯಾಗಿಲ್ಲ. ಹಳೇ ಮೈಸೂರು ಭಾಗದಲ್ಲಿ ತಾಲೂಕಿಗೆ 8 ರಿಂದ 10 ಆರೋಗ್ಯ ಕೇಂದ್ರಗಳಿವೆ. ತುರ್ತು ವೈದ್ಯಕೀಯ ಸೌಲಭ್ಯ ಒದಗಿಸಲು ನಮ್ಮ ಸರ್ಕಾರ ಮೊಬೈಲ್ ಕ್ಲಿನಿಕ್‍ಗಳನ್ನು ಆರಂಭಿಸಿದೆ. ಜೊತೆಗೆ ಎಕ್ಸ್‍ಟೆನ್ಷನ್ ಕ್ಲಿನಿಕ್‍ಗಳನ್ನು ತೆರೆಯುತ್ತಿದೆ. ಇದರಲ್ಲಿ ಒಬ್ಬ ವೈದ್ಯರು, ನರ್ಸ್ ಮತ್ತು ಫಾರ್ಮಸಿಸ್ಟ್ ಇರುತ್ತಾರೆ. ತುರ್ತು ಅಗತ್ಯ ಇರುವ ಕಡೆ ಇಂತಹ ಕೇಂದ್ರಗಳನ್ನು ಆರಂಭಿಸುವುದಾಗಿ ಅವರು ಹೇಳಿದರು.

ಬಿಜೆಪಿ ಶಾಸಕ ಸುನೀಲ್‍ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಡಾರ-ರುಬೆಲ್ಲಾ ಲಸಿಕೆ ಹಾಕಿಸಲು ಯಾವುದೇ ಶಿಕ್ಷಣ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದರೂ ಅಂತಹ ಶಿಕ್ಷಣ ಸಂಸ್ಥೆ ವಿರುದ್ದ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಸರ್ಕಾರಕ್ಕಿಂತ ಯಾವ ವ್ಯಕ್ತಿ, ಸಂಸ್ಥೆಯೂ ದೊಡ್ಡದಲ್ಲ. ದಡಾರ-ರುಬೆಲ್ಲಾ ಹಾಕಿಸಲು ಪೋಷಕರು ಆಕ್ಷೇಪಿಸುತ್ತಿದ್ದಾರೆ ಎಂದು ಕೆಲ ಶಿಕ್ಷಣ ಸಂಸ್ಥೆಗಳು ದೂರಿರುವುದು ನಿಜ ಎಂದರು.  ಲಸಿಕೆ ಆಂದೋಲನ ವಿಶ್ವ ಆರೋಗ್ಯ ಸಂಸ್ಥೆಯ ಒಂದು ಕಾರ್ಯಕ್ರಮ. ಯಾವ ಮಗುವು ಲಸಿಕೆಯಿಂದ ವಂಚಿತವಾಗಬಾರದೆಂದು ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಲಸಿಕೆ ಹಾಕಿಸಿಕೊಳ್ಳದಿದ್ದರೆ ಹೆಚ್ಚು ತೊಂದರೆಯೇನೂ ಆಗುವುದಿಲ್ಲ. ಮುಂದೆ ಪ್ರಾಣಾಪಾಯದಂತಹ ಘಟನೆಗಳನ್ನು ತಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಂಡಿದೆ. ಎಲ್ಲಾ ಮಕ್ಕಳಿಗೂ ಲಸಿಕೆ ಹಾಕಿಸಲಾಗುತ್ತಿದೆ ಎಂದರು.  ನಾನು ಸಚಿವನಾಗಿರುವವರೆಗೂ ಯಾವುದೇ ಸಂಸ್ಥೆ ಸರ್ಕಾರಕ್ಕಿಂತ ದೊಡ್ಡದು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿದರೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin