ಮುಂಬೈನಲ್ಲಿ ಶಿವಸೇನೆ ಘರ್ಜನೆ, ಪುಣೆಯಲ್ಲಿ ಅರಳಿದ ಕಮಲ
ಮುಂಬೈ, ಫೆ.23-ಏಷ್ಯಾದ ಅತ್ಯಂತ ದೊಡ್ಡ ಮತ್ತು ಶ್ರೀಮಂತ ಸ್ಥಳೀಯ ಸಂಸ್ಥೆಯಾಗಿರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ ಹಾಗೂ ಮಹಾರಾಷ್ಟ್ರದ ಇತರ 9 ಪೌರಾಡಳಿತ ಸಂಸ್ಥೆಗಳಿಗೆ ಮೊನ್ನೆ ನಡೆದ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಶಿವಸೇನೆ ಮುನ್ನಡೆ ಸಾಧಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ ಬಿಜೆಪಿ ಪ್ರಾಬಲ್ಯ ಗಳಿಸಿದೆ. ಮಹಾರಾಷ್ಟ್ರದ ಆಡಳಿತಾರೂಢ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ನಡುವೆ ಭಿನ್ನಾಭಿಪ್ರಾಯ ಉಂಟಾಗಿರುವುದರಿಂದ ಈ ಮಿನಿ ಸಾರ್ವತ್ರಿಕ ಚುನಾವಣೆ ಫಲಿತಾಂಶದತ್ತ ಎಲ್ಲರ ಕಣ್ಣು ನೆಟ್ಟಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೆ ಇದು ಪ್ರತಿಷ್ಠೆಯ ವಿಷಯವೂ ಆಗಿದೆ.
227 ಸದಸ್ಯ ಬಲದ ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ (ಬಿಎಂಪಿ) ನಿರೀಕ್ಷೆಯಂತೆ ಶಿವಶೇನೆ ಪ್ರಾಬಲ್ಯ ಸಾಧಿಸಿದ್ದು, ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ.
162 ಸದಸ್ಯರಿರುವ ಪ್ರತಿಷ್ಠಿತ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ (ಪಿಎಂಸಿ) ಬಿಜೆಪಿ ಪ್ರಾಬಲ್ಯ ಸಾಬೀತಾಗಿದೆ. ಶರದ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಎರಡನೇ ಸ್ಥಾನದಲ್ಲಿದ್ದು, ಶಿವಸೇನೆ ಮೂರನೇ ಸ್ಥಾನದೊಂದಿಗೆ ತೀವ್ರ ಹಿನ್ನಡೆ ಅನುಭವಿಸಿದೆ. ನಾಸಿಕ್ ಪೌರಾಡಳಿತ ಚುನಾವಣೆಯಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸಿದೆ. ಉಳಿದ ಪಾಲಿಕೆ ಚುನಾವಣೆಗಳಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವೆ ಹಾವು-ಏಣಿಯಾಟದಂಥ ಸ್ಫರ್ಧೆ ನಡೆಯುತ್ತಿದೆ.
10 ನಗರ ಪಾಲಿಕೆಗಳು, 11 ಜಿಲ್ಲಾ ಪರಿಷತ್ ಮತ್ತು 118 ಪಂಚಾಯತ್ ಸಮಿತಿಗಳ 3210 ಸ್ಥಾನಗಳಿಗಾಗಿ ಸ್ಪರ್ಧಿಸಿದ್ದ 17,331 ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಸಂಜೆ ಸ್ಪಷ್ಟ ಚಿತ್ರಣ ಲಭಿಸಲಿದೆ.
ಈ ನಡುವೆ ಕಾಂಗ್ರೆಸ್ ಹಲವೆಡೆ ಸಮಾನ ಹೋರಾಟ ನೀಡಿದ್ದರೆ, ಎಂಎನ್ಎಸ್ ಮತ್ತು ಪಕ್ಷೇತರರು ಯಶಸ್ಸು ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಥಾಣೆ, ಉಲ್ಲಾಸ್ನಗರ, ಪುಣೆ, ಪಿಂಪ್ರಿ-ಚಂಚವಾಡ, ಸೊಲ್ಲಾಪುರ, ನಾಸಿಕ್, ಅಕೋಲಾ, ಅಮರಾವತಿ, ನಾಗಪುರ ನಗರಪಾಲಿಕೆಗಳು ಹಾಗೂ ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿಗಳಲ್ಲಿ ಹುಲಿ ಮತ್ತು ಕಮಲ ಚಿಹ್ನೆ ಪಕ್ಷಗಳ ನಡುವೆ ಪೈಪೋಟಿ ನಡೆದಿದೆ. ಕೆಲವೆಡೆ ಕಾಂಗ್ರೆಸ್ ಮತ್ತು ಎನ್ಸಿಪಿ ನಡುವೆ ಹಣಾಹಣಿ ಏರ್ಪಟ್ಟಿದೆ.
< Eesanje News 24/7 ನ್ಯೂಸ್ ಆ್ಯಪ್ >