ಮುಂಬೈನ ಜಿನ್ನಾ ಹೌಸ್ ಹಸ್ತಾಂತರಿಸಿ : ಪಾಕ್ ಹೊಸ ಕ್ಯಾತೆ
ಇಸ್ಲಾಮಾಬಾದ್/ಮುಂಬೈ, ಏ.1-ಭಾರತದ ವಿರುದ್ಧ ಪಾಕಿಸ್ತಾನ ಈಗ ಮತ್ತೆ ತಗಾದೆ ತೆಗೆದಿದೆ. ಪಾಕ್ ಸಂಸ್ಥಾಪಕ ಮಹಮದ್ ಅಲಿ ಜಿನ್ನಾ ಅವರ ಒಡೆತನದಲ್ಲಿದ್ದ ಮುಂಬೈನ ಜಿನ್ನಾ ಹೌಸ್ ನೆಲಸಮಗೊಳಿಸುವಂತೆ ಬಿಜೆಪಿ ಶಾಸಕರು ಆಗ್ರಹಿಸಿರುವ ಹಿನ್ನೆಲೆಯಲ್ಲಿ ಆ ನಿವಾಸದ ಮೇಲೆ ತಾನು ಹೊಂದಿರುವ ಒಡೆತನದ ಹಕ್ಕನ್ನು ಗೌರವಿಸುವಂತೆ ಇಸ್ಲಾಮಾಬಾದ್ ಭಾರತವನ್ನು ಒತ್ತಾಯಿಸಿದೆ. ಜಿನ್ನಾ ಹೌಸ್ ಭಾರತ-ಪಾಕಿಸ್ತಾನ ವಿಭಜನೆಯ ಸಂಕೇತವಾಗಿದೆ. ಭಾರತವನ್ನು ಇಬ್ಭಾಗ ಮಾಡುವ ಸಂಚು ನಡೆದಿದ್ದು ಇದೇ ಜಿನ್ನಾ ಹೌಸ್ನಲ್ಲಿ. ಹೀಗಾಗಿ ಅದನ್ನು ನೆಲಸಮಗೊಳಿಸಿ ಅಲ್ಲಿ ಸಾಂಸ್ಕøತಿಕ ಕೇಂದ್ರ ನಿರ್ಮಿಸಬೇಕು ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಮಂಗಲ್ ಲೋಧಾ ಆಗ್ರಹಿಸಿದ್ದರು. ಈ ಹೇಳಿಕೆಯಿಂದ ಕೆರಳಿರುವ ಪಾಕಿಸ್ತಾನ ಈಗ ಈ ವಿಷಯದಲ್ಲಿ ಮತ್ತೆ ವಿವಾದ ಹುಟ್ಟುಹಾಕುತ್ತಿದೆ.
ಮುಂಬೈನ ಮಲಬಾರ್ ಹಿಲ್ಸ್ನ ಎರಡೂವರೆ ಎಕರೆ ಪ್ರದೇಶದಲ್ಲಿರುವ ಈ ಭವ್ಯ ಕಟ್ಟಡವು ಸುಮಾರು 400 ದಶಲಕ್ಷ ಡಾಲರ್ (ಸುಮಾರು 250 ಕೋಟಿ ರೂ.ಗಳು) ಮೌಲ್ಯದ್ದಾಗಿದೆ. ಇದರ ಮಾಲೀಕತ್ವ ಕುರಿತು ಜಿನ್ನಾರ ಪುತ್ರಿ ದೀನಾ ವಾಡಿಯಾ ಹಾಗೂ ಭಾರತ ಮತ್ತು ಪಾಕಿಸ್ತಾನದ ನಡುವೆ ದೀರ್ಘ ಕಾಲದಿಂದಲೂ ಕಾನೂನು ಸಂಘರ್ಷ ನಡೆಯುತ್ತಿದೆ. ಜಿನ್ನಾ ಹೌಸ್ನನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಬಗ್ಗೆ ಪಾಕಿಸ್ತಾನ ಪದೇ ಪದೇ ಕ್ಯಾತೆ ತೆಗೆಯುತ್ತಲೇ ಇದೆ.
ಈ ವಿಷಯದಲ್ಲಿ ಪಾಕಿಸ್ತಾನದ ಒಡೆತನದ ಹಕ್ಕುಗಳನ್ನು ಭಾರತ ಸರ್ಕಾರವು ಗೌರವಿಸಬೇಕಾಗಿದೆ ಎಂದು ವಿದೇಶಾಂಗ ಕಚೇರಿಯ ವಕ್ತಾರ ನಫೀಜ್ ಝಕಾರಿಯಾ ಇಸ್ಲಾಮಾಬಾದ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಜಿನ್ನಾ ಹೌಸ್ ರಕ್ಷಿಸುವ ಮತ್ತು ಸುಸ್ಥಿತಿಯಲ್ಲಿಡುವ ತನ್ನ ಬಾಧ್ಯತೆಯನ್ನು ಭಾರತ ಈಡೇರಿಸುತ್ತದೆ ಎಂದು ನಾವು ನಿರೀಕ್ಷೆ ಹೊಂದಿದ್ದೇವೆ ಎಂದಿರುವ ಅವರು, ಈ ಕಟ್ಟಡವನ್ನು ಪಾಕ್ಗೆ ಹಸ್ತಾಂತರಿಸಬೇಕೆಂಬ ಬಗ್ಗೆಯೂ ಬೇಡಿಕೆ ಮುಂದಿಟ್ಟಿದ್ದಾರೆ. ( ಈ ಸಂಜೆ ಸುದ್ದಿ )
< Eesanje News 24/7 ನ್ಯೂಸ್ ಆ್ಯಪ್ >