ಅಮ್ಮನ ನಾಡಿಗೆ ಚಿನ್ನಮ್ಮ ಸಿಎಂ, ನಾಳೆ ಪಟ್ಟಾಭಿಷೇಕ

Shashikala-Natarajan

ಚೆನ್ನೈ, ಫೆ.5– ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರ ಪರಮಾಪ್ತೆ ಮತ್ತು ಎಐಎಡಿಂಕೆ ಪ್ರಧಾನ ಕಾರ್ಯದರ್ಶಿ ಚಿನ್ನಮ್ಮ ಎಂದೇ ಖ್ಯಾತಿ ಗಳಿಸಿರುವ ಶಶಿಕಲಾ ನಟರಾಜನ್ ಪಕ್ಷದ ಶಾಸಕಾಂಗ ಪಕ್ಷದ ನಾಯಕಿಯಾಗಿ ಇಂದು ಆಯ್ಕೆಯಾಗಿದ್ದು, ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.  ಚೆನ್ನೈನಲ್ಲಿ ಇಂದು ಬೆಳಿಗ್ಗಿನಿಂದ ನಡೆದ ಎಐಎಡಿಎಂಕೆ ತುರ್ತು ಶಾಸಕಾಂಗ ಪಕ್ಷದ ಸಭೆಯಲ್ಲಿ ಶಶಿಕಲಾ ಅವರನ್ನು ಒಮ್ಮತದಿಂದ ಅಣ್ಣಾ ಡಿಎಂಕೆಎಲ್‍ಪಿ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದರ ಬೆನ್ನಲ್ಲೇ ಹಾಲಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ತಮ್ಮ ಸ್ಥಾನಕ್ಕೆ ಸಲ್ಲಿಸಿದ್ದಾರೆ. (ಅಮ್ಮನ ಜಾಗಕ್ಕೆ ಚಿನ್ನಮ್ಮ : ತಮಿಳುನಾಡು ನೂತನ ಸಿಎಂ ಆಗಿ ಶಶಿಕಲಾ ನಟರಾಜನ್‍ ಆಯ್ಕೆ)

ನಾಳೆ ಶಶಿಕಲಾ ನಟರಾಜನ್ ನೇತೃತ್ವದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು ನೂತನ ಸಚಿವರು ಪ್ರಮಾನ ವಚನ ಸ್ವೀಕರಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜಯಲಲಿತಾ ಅವರು ನಿಧನರಾದ ದಿನದಿಂದಲೂ ತಮಿಳುನಾಡಿನಲ್ಲಿ ರಾಜಕೀಯ ಬೆಳವಣಿಗೆಗಳು ಕುತೂಹಲ ಕೆರಳಿಸಿತ್ತು. ಶಶಿಕಲಾ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು, ಆದರೆ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿ ಒಂದು ತಿಂಗಳು ಕಳೆಯುವಷ್ಟರಲ್ಲೇ ಮಹತ್ವದ ಬೆಳವಣಿಗೆಯಲ್ಲಿ ಈ ಮಾತು ನಿಜವಾಗುತ್ತಿದೆ.

ಅದೃಷ್ಟವಂತೆ ಶಶಿಕಲಾ :

ಶಶಿಕಲಾ ನಟರಾಜನ್ ಜಯಲಲಿತಾರ ಸರ್ವಸ್ವವೂ ಆಗಿದ್ದರು. ಜಯಾರ ಕಣ್ಣು, ಕಿವಿ, ಮೂಗು, ಬಾಯಿ ಎಲ್ಲಾ ಅಗಿದ್ದುಂಟು ಎಂದು ಜಯಾರ ಆಪ್ತ ವಲಯ ಬಣ್ಣಿಸುತ್ತಿದ್ದರು. ಇಂಥ ಶಶಿಕಲಾ ಅಂದ ಕಾಲತ್ತಿಲ್ ಜಯಲಲಿತಾರ ಸಾಕ್ಷ್ಯಚಿತ್ರ ನಿರ್ಮಿಸುವ ಸಲುವಾಗಿ ಪುರುಚ್ಚಿ ತಲೈವಿಯನ್ನು ಭೇಟಿ ಮಾಡಿದ್ದರು. ಅವರ ವಿಶ್ವಾಸ ಮತ್ತು ಗೆಳೆತನ ಸಂಪಾದಿಸಿ ಶಶಿಕಲಾ ಪಕ್ಷದ ಮುಖ್ಯಸ್ಥೆಯಾಗಿ ಮತ್ತು ತಮಿಳುನಾಡಿನ ಮುಖ್ಯಮಂತ್ರಿಯಾಗುವ ಮಟ್ಟಕ್ಕೂ ಬೆಳೆದಿದ್ದು ಬೆರಗು ಮೂಡಿಸುತ್ತದೆ.

ಹಿನ್ನೆಲೆ :

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಶಶಿಕಲಾರ ಪತಿ ನಟರಾಜನ್ ಉದ್ಯೋಗ ಕಳೆದುಕೊಂಡಿದ್ದರು. ಕುಟುಂಬ ನಿರ್ವಹಣೆಗಾಗಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಮಾರಿ ಅಥವಾ ಗಿರವಿ ಇಟ್ಟು ಶಶಿಕಲಾ ಸಂಸಾರ ನಿಭಾಯಿಸಿದ್ದರು. 1980ರಲ್ಲಿ ಅವರ ಪತ್ನಿಗೆ ಉದ್ಯೋಗ ಲಭಿಸಿತು. ಶಶಿಕಲಾ ವಿಡಿಯೋ ಬಾಡಿಗೆ ನೀಡುವ ಅಂಗಡಿ ತೆರೆದಿದ್ದರು. ಶಶಿಕಲಾ ಮತ್ತು ಜಯಲಲಿತಾ ಅವರ ಸ್ನೇಹ ಸೇತುವೆ ಆರಂಭವಾಗಿದ್ದು 80ರ ದಶಕದಲ್ಲಿ. ಎಂಜಿಆರ್ ಜೊತೆ ಜಯಲಲಿತಾ ಅವರು ರಾಜಕೀಯದಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದರು. ಇದೇ ವೇಳೆ ಜಯಾರನ್ನು ಸಂಪರ್ಕಿಸಿದ ಅವರು ನಿಮ್ಮ ಸಾಕ್ಷ್ಯಚಿತ್ರ ನಿರ್ಮಿಸಲು ತಾವು ಆಸಕ್ತಿ ಹೊಂದಿರುವುದಾಗಿ ಹೇಳಿಕೊಂಡು ಭೇಟಿ ಮಾಡಿದ್ದರು. ಆ ಪರಿಚಯ ನಂತರ ಗಾಢ ಗೆಳೆತನಕ್ಕೆ ತಿರುಗಿತು.  ಜಯಲಲಿತಾರ ಕಷ್ಟಕಾಲ ಮತ್ತು ಯಶಸ್ಸಿನ ಉತ್ತುಂಗ ಎರಡರಲ್ಲೂ ಜೊತೆಗಿದ್ದು ನೋವು-ನಲಿವುಗಳಿಗೆ ಸ್ಪಂದಿಸಿದ್ದರು. 2011ರಲ್ಲಿ ಸ್ವಜನ ಪಕ್ಷಪಾತಕ್ಕಾಗಿ ಜಯಾರ ಕೆಂಗಣ್ಣಿಗೆ ಗುರಿಯಾಗಿದ್ದ ಶಶಿಕಲಾರನ್ನು ಇತರ 13 ಜನರೊಂದಿಗೆ ಎಐಎಡಿಎಂಕೆ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿತ್ತು. ಅಲ್ಲದೇ ಮನೆಯಿಂದಲೂ ಹೊರಗಟ್ಟಿದ್ದರು.

ಜಯಾ ಅವರು ಆಸ್ಪತ್ರೆಯಲ್ಲಿದ್ದ ಎರಡು ತಿಂಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯ ಆರೈಕೆ ಮಾಡಿದ್ದರು. ಆದರೆ ಅವರು ಯಾರಿಗೂ ಜಯಾರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಜಯಾ ಸಾವಿಗೆ ಶಶಿಕಲಾರೇ ಕಾರಣ ಎಂಬ ಅಪಾದನೆಗಳ ನಡುವೆಯೂ ಪಕ್ಷದ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾಗಿರುವುದು ಅದೃಷ್ಟವಲ್ಲದೇ ಮತ್ತೇನು ? ಶಶಿಕಲಾ ನಟರಾಜನ್ ಅವರು ಜಯಾ ನಿಧನದ ಬಳಿಕ ಅವರ ಅಧಿಕೃತ ನಿವಾಸದಲ್ಲೇ ವಾಸ್ತವ ಹೂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin