ಮುಖ್ಯಮಂತ್ರಿಯೂ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಸರ್ಕಾರಿ ಶಾಲೆ ದತ್ತು ಪಡೆಯುವುದು ಕಡ್ಡಾಯ

School

ಬೆಂಗಳೂರು, ಸೆ.15-ಇನ್ನು ಮುಂದೆ ಮುಖ್ಯಮಂತ್ರಿ ಸೇರಿದಂತೆ ಪ್ರತಿಯೊಬ್ಬ ಜನಪ್ರತಿನಿಧಿಗಳು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಬೇಕು. ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಪ್ರಸಕ್ತ ವರ್ಷ 5 ಸಾವಿರ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ.  ಅಧಿಸೂಚನೆ ಪ್ರಕಾರ ಮುಖ್ಯಮಂತ್ರಿ, ಸಚಿವರು, ಶಾಸಕರು, ಮೇಯರ್ ಉಪಮೇಯರ್, ಕಾರ್ಪೊರೇಟರ್’ಗಳು, ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಸದಸ್ಯರು, ಐಎಎಸ್, ಐಪಿಎಸ್, ಐಎಫ್‍ಎಸ್, ಕೆಎಎಸ್ ಅಧಿಕಾರಿಗಳು ಕೂಡ ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ಪಡೆಯಬೇಕು.

ಈ ಹಿಂದೆ ಶಾಲೆಗಾಗಿ ನಾವು-ನೀವು ಎಂಬ ಯೋಜನೆಯನ್ನು ಆರಂಭಿಸಲಾಗಿತ್ತು. ಈ ಪ್ರಕಾರ ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಶಾಲೆಯನ್ನು ದತ್ತುಪಡೆದು ಶೌಚಾಲಯ, ಕುಡಿಯುವ ನೀರು, ಮಧ್ಯಾಹ್ನದ ಬಿಸಿಯೂಟಕ್ಕೆ ಪ್ರತ್ಯೇಕ ಕಟ್ಟಡ, ಕ್ರೀಡಾಂಗಣ, ಗ್ರಂಥಾಲಯ, ಕಂಪ್ಯೂಟರ್ ಸೌಲಭ್ಯ, ಶಾಲೆಗೆ ಕಾಂಪೌಂಡ್, ಉತ್ತಮ ಪರಿಸರಕ್ಕಾಗಿ ಗಿಡಗಳನ್ನು ನೆಡುವ ಯೋಜನೆ ಇದಾಗಿತ್ತು. ಆದರೆ ಇದನ್ನು ಸರ್ಕಾರ ಕಡ್ಡಾಯಗೊಳಿಸಿರಲಿಲ್ಲ. ಬೆರಳಣಿಕೆಯಷ್ಟು ಜನಪ್ರತಿನಿಧಿಗಳು ಮಾತ್ರ ಶಾಲೆಗಳನ್ನು ದತ್ತು ಪಡೆದರೆ ಹೊರತು ಅವುಗಳಿಗೆ ಬೇಕಾದ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾದರು. ಇದೀಗ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇನ್ನು ಮುಂದೆ ಕಡ್ಡಾಯವಾಗಿ ದತ್ತು ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಕಾರಣವೇನು?

ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿತ್ತು. ಖಾಸಗಿ ಶಾಲೆಗಳಿಗೆ ಸ್ಪರ್ಧೆವೊಡ್ಡುವ ಶಿಕ್ಷಣ ನೀಡಬೇಕೆಂಬುದು ಸರ್ಕಾರದ ಉದ್ದೇಶವಾಗಿತ್ತು.
ಒಂದೆಡೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯೇ ಕಡಿಮೆಯಾಗುತ್ತಿತ್ತು. ಇಂತಹ ವೇಳೆ ಅವರನ್ನು ಆಕರ್ಷಿಸಲು ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಸೈಕಲ್, ಪಠ್ಯಪುಸ್ತಕ, ಬಾಲಕಿಯರಿಗೆ ಪ್ರೋತ್ಸಾಹ ಧನ ಸೇರಿದಂತೆ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸಲು ಮುಂದೆ ಬಂದಿತ್ತು.  ಆದರೆ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಯಿಂದ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದರು. ಇದನ್ನು ಮನಗಂಡ ಸರ್ಕಾರ, ಸರ್ಕಾರಿ ಶಾಲೆಗಳಿಗೂ ಉತ್ತಮ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಜನಪ್ರತಿನಿಧಿಗಳಿಗೆ ದತ್ತು ಪಡೆಯುವ ಹೊಣೆಗಾರಿಕೆ ನೀಡಿದೆ.

Sri Raghav

Admin