ಮುಗಿಲು ಮುಟ್ಟಿದ ಅಂಗನವಾಡಿ ಕಾರ್ಯಕರ್ತೆಯರ ಆರ್ತನಾದ

Anganawadi--X1
ಬೆಂಗಳೂರು,ಮಾ.23-ಅಂಗನವಾಡಿ ಕಾರ್ಯಕರ್ತೆಯರ ಆರ್ತನಾದ ಮುಗಿಲು ಮುಟ್ಟಿದೆ. ತಮ್ಮ ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ಎಳೆಯ ಮಕ್ಕಳೊಂದಿಗೆ ಬೀದಿಗಿಳಿದು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ 4ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾನಿರತರಲ್ಲಿ 20ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದು , ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.   ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಏಪ್ರಿಲ್ 19ರಂದು ಸಭೆ ಕರೆದು ಚರ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಭರವಸೆಯನ್ನು ತಿರಸ್ಕರಿಸಿರುವ ಕಾರ್ಯಕರ್ತೆಯರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು ವೇತನವನ್ನು 10 ಸಾವಿರ ರೂ.ಗೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ್ದಾರೆ.

Anganawadi--X4

10 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಫ್ರೀಡಂಪಾರ್ಕ್‍ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವುದರಿಂದ ಕುಡಿಯುವ ನೀರು ಶೌಚಾಲಯಕ್ಕೆ ತೀವ್ರ ತೊಂದರೆಯಾಗಿದೆ.   ಸರ್ಕಾರ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದೆಯಾದರೂ ಅದು ಸಾಕಾಗದೆ ಮಹಿಳೆಯರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಪ್ರತಿಭಟನಾನಿರತ ಹಲವು ಮಹಿಳೆಯರಿಗೆ ಕಾರ್ಮಿಕ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು ಬೆಂಬಲ ಸೂಚಿಸಿವೆ.

Anganawadi--X5

ಇಂದು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಮನೆಯಲ್ಲಿ ಮಕ್ಕಳನ್ನು ಬಿಟ್ಟು ಮಹಿಳೆಯರು ಪ್ರತಿಭಟನಾನಿರತರಾಗಿದ್ದಾರೆ. ಮಕ್ಕಳಿಗೆ ಪರೀಕ್ಷೆ ಸಮಯ ಇಂತಹ ಸಂದರ್ಭದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ನಾವು ಯುಗಾದಿ ಹಬ್ಬವನ್ನು ಇಲ್ಲೇ ಮಾಡುತ್ತೇವೆ. ಬೇಡಿಕೆ ಈಡೇರುವವರೆಗೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಧರಣಿನಿರತರು ಪಟ್ಟು ಹಿಡಿದಿದ್ದಾರೆ.

Anganawadi--X3

ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯಲ್ಲಿ ಆರು ಸಂಘಗಳಿವೆ. ಮುಖ್ಯಮಂತ್ರಿಗಳು ಸುಮಾರು 4 ಸಂಘಟನೆಯವರನ್ನು ಕರೆದು ಮಾತುಕತೆ ನಡೆಸಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವಂತೆ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.  ಈ ನಾಲ್ಕು ಸಂಘಟನೆಯವರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ  ಉಳಿದವರು ಪ್ರತಿಭಟನೆ ಹಿಂಪಡೆಯುವ ನಿರ್ಧಾರ ಮಾಡಿಲ್ಲ. ಹಾಗಾಗಿ ಧರಣಿ ಮುಂದುವರೆದಿದೆ.   ಭಾಷ್ ಕಂಪನಿ ನೌಕರರು ಸೇರಿದಂತೆ ವಿವಿಧ ಸಂಘಸಂಸ್ಥೆಯವರು ಧರಣಿ ನಿರತರಿಗೆ ಬ್ರೆಡ್, ಚಪಾನಿ, ಪರೋಟ ವಿತರಣೆ ಮಾಡಿದರು. ಎಂ.ಪಿ.ಪ್ರಕಾಶ್ ಟ್ರಸ್ಟ್ ವತಿಯಿಂದ ತಿಂಡಿ ವಿತರಿಸಲಾಯಿತು.

Anganawadi--X2

ಕೆಲವು ಮಹಿಳೆಯರು ರಸ್ತೆಯಲ್ಲೇ ಕುಳಿತು ಶಿವಪೂಜೆ ನೆರವೇರಿಸುತ್ತಿದ್ದ ದೃಶ ಕಂಡುಬಂತು. ಬೀದರ್ ಜಿಲ್ಲೆ ಬಸವ ಕಲ್ಯಾಣ ತಾಲ್ಲೂಕಿನ ಅಲಗೂಡು ನಿವಾಸಿ ಅಂಗನವಾಡಿ ಸಹಾಯಕಿ ಗಂಗಾ ಅವರು ರಸ್ತೆಯಲ್ಲೇ ಕುಳಿತು ಶಿವಪೂಜೆ ಮಾಡುತ್ತಿದ್ದ ದೃಶ್ಯ ಕಂಡುಬಂತು.   ಇಂದು ಭಗತ್‍ಸಿಂಗ್ ಹುತಾತ್ಮರಾದ ದಿನವಾದ್ದರಿಂದ ಅಂಗನವಾಡಿ ಕಾರ್ಯಕರ್ತೆಯರು ಶ್ರದ್ಧಾಂಜಲಿ ಸಲ್ಲಿಸಿದರು. ಶಾ ಯಾನ ಬಳಿ ಕುಳಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹಾಗೂ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದರು.

ಕಳೆದ 26 ವರ್ಷಗಳಿಂದ ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಯಾರೂ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದರು.   ತಮಗೆ ಕೊಟ್ಟ ತಿಂಡಿ, ನೀರಿನಲ್ಲಿ ತಮ್ಮ ಮಕ್ಕಳಿಗೊಂದಿಷ್ಟು, ತಮ್ಮ ಜೊತೆ ಬಂದವರಿಗೊಂದಿಷ್ಟು ಕೊಟ್ಟು ತಿನಿಸುತ್ತಿದ್ದದ್ದು ಎಂಥವರ ಮನಸ್ಸನ್ನು ಕಲಕುತ್ತಿತ್ತು. ಅದೇಕೋ ನಮ್ಮ ಸರ್ಕಾರದ ಕಣ್ಣು ತೆರೆಯುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಹೆಚ್ಚಿಸಬೇಕೆಂಬುದು ಎಲ್ಲರ ಆಗ್ರಹವಾಗಿದೆ.   ಉಭಯ ಸದನಗಳಲ್ಲಿ ಕೂಡ ಈ ಬಗ್ಗೆ ಚರ್ಚೆಯಾಗಿದೆ. ಸರ್ಕಾರ ಮನಸು ಮಾಡಿ ಇವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin