ಮೂರು ತಿಂಗಳೊಳಗೆ ಕೋಲಾರ ಕೆರೆಗಳಿಗೆ ನೀರು

kolegala--river

ಕೋಲಾರ, ಸೆ.23-ಕೋರಮಂಗಲ ಚಲ್ಲಘಟ್ಟ ಕಣಿವೆ ಯೋಜನೆಯ ವ್ಯಾಪ್ತಿಗೆ ಬರುವ 44 ಕಿ.ಮೀ.ಉದ್ದದ ಕಾಲುವೆಗಳ ಸ್ವಚ್ಛತೆ, ದುರಸ್ತಿ ಹಾಗೂ ಒತ್ತುವರಿ ತೆರವು ಕಾರ್ಯ ಪೂರ್ಣಗೊಂಡಿದ್ದು 3 ತಿಂಗಳ ಒಳಗೆ ಕೆರೆಗಳಿಗೆ ನೀರು ತುಂಬಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್‍ಚಂದ್ರ ತಿಳಿಸಿದರು. ಕೋರಮಂಗಲ ಚಲ್ಲಘಟ್ಟ ಕಣಿವೆ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಪರ್ಜೇನಹಳ್ಳಿ ಕೋಡಿ ಕಾಲುವೆ, ಸೋಮಾಂಬುಧಿ ಅಗ್ರಹಾರ ಕೆರೆ ಹಾಗೂ ಹೊಳಲಿ ಗ್ರಾಮಗಳಿಗೆ ಭೇಟಿ ನೀಡಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಈ ಯೋಜನೆಯಡಿ ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ 121 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು ಇದಕ್ಕಾಗಿ ಕೆರೆ ಅಂಗಳದಲ್ಲಿ ಬೆಳೆದಿರುವ ನೀಲಗಿರಿ ಮತ್ತು ಜಾಲಿ ಮರಗಳನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೆ 250 ಕಿ.ಮೀ. ಉದ್ದದ ಕೆರೆಗಳನ್ನು ಸಂಪರ್ಕಿಸುವ ಕಾಲುವೆಗಳ ಸ್ವಚ್ಛತೆ, ನೀರು ಸರಾಗವಾಗಿ ಹರಿದು ಹೋಗುವಂತೆ ಹೂಳು ತೆಗೆಯುವುದು, ಒತ್ತುವರಿ ತೆರವು ಸೇರಿದಂತೆ ಮೊದಲಾದ ಕೆಲಸಗಳು ಆಗಬೇಕಾಗಿದ್ದು ಈಗಾಗಲೇ 44 ಕಿ.ಮೀ. ಕಾಲುವೆ ಸ್ವಚ್ಛತೆ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಕೆರೆಯಂಗಳದಲ್ಲಿ ಕಾಲುವೆಗಳ ಹಾದಿಯಲ್ಲಿ ಕೊರೆದಿರುವ ಕೊಳವೆ ಬಾವಿಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಹಸ್ತಾಂತರಿಸಲು ಸೂಚಿಸಲಾಗಿದೆ ಎಂದರು.ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜನಿಯರ್‍ಗಳಾದ ಪ್ರದೀಪ್ ಮತ್ತು ಲಕ್ಷ್ಮೀ, ಎಇ ಬಸವೇಗೌಡ, ಶಿವಣ್ಣ, ಮೆಗಾ ಇಂಜನಿಯರಿಂಗ್ ಸಂಸ್ಥೆ ಪ್ರಧಾನ ವ್ಯವಸ್ಥಾಪಕ ವಿಜಯ್‍ಕುಮಾರ್ ರೆಡ್ಡಿ ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

Sri Raghav

Admin