ಮೂವಿಂಗ್ ವಾಟರ‍್ಸ್ ಚಲನಚಿತ್ರೋತ್ಸವ

water-movie

ಬೆಂಗಳೂರು,ಸೆ.16-ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳ ಪ್ರದರ್ಶನ, ಖ್ಯಾತ ತಜ್ಞರು-ಪರಿಸರ ಪರಿಣಿತರಿಂದ ಉಪನ್ಯಾಸ ಹಾಗೂ ಚಲನಚಿತ್ರ ನಿರ್ಮಾಣ ಕುರಿತ ಕಮ್ಮಟವನ್ನೊಳಗೊಂಡ ಎರಡು ದಿನಗಳ ಚಲನಚಿತ್ರೋತ್ಸವವನ್ನು ನಾಳೆ ಮತ್ತು 18ರಂದು ಆಯೋಜಿಸಲಾಗಿದೆ.  ಈ ಸಮಾರಂಭವು ಇಂದಿರಾ ನಗರದಲ್ಲಿರುವ ಗೋಯಥೆ ಇನ್‌ಸ್ಟಿಟ್ಯೂಟ್ ಮ್ಯಾಕ್ಸ್‌ಮುಲ್ಲರ್ ಭವನದಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 7ರಿಂದ ನಡೆಯಲಿದ್ದು , ಪ್ರವೇಶ ಉಚಿತ ವಾಗಿರುತ್ತದೆ.  ನದಿಗಳು ಮತ್ತು ಸಾಗರಗಳ ಸೌಂದರ್ಯ ಹಾಗೂ ಅವುಗಳನ್ನು ಬಾಸುತ್ತಿರುವ ಸಮಸ್ಯೆಗಳನ್ನು ದೂರದ ಜನರಿಗೆ ಬಿಂಬಿಸಲು ಈ ಚಲನಚಿತ್ರೋತ್ಸವವನ್ನು ಆಯೋಜಿಸಿದೆ.

ಸಾಗರಗಳು ಮತ್ತು ನದಿಗಳ ವಿಷಯದಲ್ಲಿ ಸಂಶೋಧನೆ ಅನ್ವೇಷಣೆ ಸಂರಕ್ಷಣೆ ಕುರಿತ ಚಿತ್ರ ತಯಾರಿಕೆಯ ಪ್ರಥಮ ಏಕೈಕ ಚಲನಚಿತ್ರೋತ್ಸವ ಇದಾಗಿದೆ. ಕುಡಿಯಲು, ತೈಲಾನ್ವೇಷಣೆ, ಜಲವಿದ್ಯುತ್ ಉತ್ಪಾದನೆ ಮೀನುಗಾರಿಕೆ ಹಾಗೂ ಜಲಮೂಲಗಳ ಅವಲಂಬನೆ ಕುರಿತ ವಿವಿಧ ಬಗೆಗಳನ್ನು ಉತ್ಸವದಲ್ಲಿ ಪ್ರದರ್ಶನ ಮಾಡಲಾಗುವುದು. ಚಂದ್ರ, ಮಂಗಳ ಗ್ರಹಗಳ ಮೇಲ್ಮೈ ಕುರಿತು ನಾವು ಹೊಂದಿರುವ ಜ್ಞಾನಕ್ಕಿಂತಲೂ ಕಡಿಮೆ ಜ್ಞಾನವನ್ನು ಸಾಗರದ ಆಳದಲ್ಲಿರುವ ಜೀವರಾಶಿಗಳ ಬಗ್ಗೆ ಹೊಂದಿದ್ದೇನೆ.

ಇಲ್ಲಿ ಪ್ರದರ್ಶನಗೊಳ್ಳುವ ಚಲನಚಿತ್ರಗಳು ಸಾಗರ ನದಿಗಳ ಜಲಚರಗಳ ಅದ್ಭುತ ವೈಚಿತ್ರ್ಯಗಳನ್ನು ಹಾಗೂ ಅವನ್ನು ವಿನಾಶ ಮಾಡುವ ಸಂಗತಿಗಳನ್ನು ದಾಖಲಿಸುತ್ತವೆ. ಚಲನಚಿತ್ರ ಮಾಧ್ಯಮದ ಮೂಲಕ ಭಾರತ ಹಾಗೂ ವಿದೇಶಗಳಲ್ಲಿ ನೀರನ್ನು ಕುರಿತ ಜ್ವಲಂತ ಸಮಸ್ಯೆಗಳ ಬಗ್ಗೆ ಮುಕ್ತ ಚರ್ಚೆಯನ್ನು ಹುಟ್ಟು ಹಾಕುವ ಅಭಿಲಾಷೆಯನ್ನು ಪ್ರಾಯೋಜಕರು ಹೊಂದಿದ್ದಾರೆ. 30ಕ್ಕೂ ಹೆಚ್ಚು ಚಲನಚಿತ್ರಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಉತ್ಸವದಲ್ಲಿ ಭಾಗವಹಿಸುವ ಚಲನಚಿತ್ರಗಳ ನಿರ್ಮಾಪಕರೇ ಪ್ರಶ್ನೋತ್ತರ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಎಂಟು ಪ್ರಮುಖ ಭಾಷಣಕಾರರಿದ್ದಾರೆ. ಗ್ರಾಮ್ಮಿ ಪ್ರಶಸ್ತಿ ವಿಜೇತ ರಿಕ್ಕಿಖೇಜ್ ಖ್ಯಾತ ವಿಜ್ಞಾನಿಗಳಾದ ಜಾನ್ ಕುರಿಯನ್, ಸಿದ್ಧಾರ್ಥ ಚಕ್ರವರ್ತಿ ಮತ್ತು ಅನ್ವೇಷಕರೂ ಶಿಕ್ಷಣ ತಜ್ಞರೂ ಆದ ಆರತಿ ಕುಮಾರರಾವ್ ಮಣಿಕ್ ತನೇಜ ಅವರು ಪ್ರೇಕ್ಷಕರನ್ನು ಸೆರೆ ಹಿಡಿಯಲಿದ್ದಾರೆ.

ರಾಜ್ಯ ರಾಜ್ಯಗಳ ನಡುವೆ ನದಿ ನೀರಿನ ಸಂಘರ್ಷವಿರುವ ಈ ಸಂದರ್ಭದಲ್ಲಿ ಈ ಉತ್ಸವವು ಪ್ರಸ್ತುತವಾಗಿದೆ. ನೀರಿನ ಬಳಕೆ ಮತ್ತು ಜ್ಞಾನ ಪರಿಸರ ಮಾತ್ರವಲ್ಲದೆ ಬೆಂಗಳೂರು ಹಾಗೂ ಇತರ ನಗರಗಳ ಜನತೆಯ ಜೀವನದ ಮೇಲೆ ಬೀರುವ ಪರಿಣಾಮ ಕುರಿತು ಗಂಭೀರ ಚಿಂತನೆ ನಡೆಯಲಿದೆ. ಒಳನಾಡಿನ ನೀರಿನ ಬಳಕೆಯಿಂದ ಆರಂಭವಾಗುವ ಚರ್ಚೆ ನದಿ ಹರಿವಿನ ಗುಂಟ ಸಾಗಿ ಸಮುದ್ರ ತೀರ ಸಾಗರಗಳಲ್ಲಿ ಅಂತ್ಯಗೊಳ್ಳುವ ಕಥಾನಕವು ಭೂಮಿಯ ಮೇಲಿನ ಜಲಮೂಲಗಳೊಡನೆ ನಮ್ಮ ಬದುಕು ಎಷ್ಟು ನಿಕಟವಾಗಿ ಬೆಸಗೊಂಡಿದೆ ಎಂಬುದನ್ನು ಪ್ರತಿಬಿಂಬಸುತ್ತದೆ.

► Follow us on –  Facebook / Twitter  / Google+

Sri Raghav

Admin