ಮೂಸಂಬಿ, ಬಿರಿಯಾನಿ ಮೂಲಕ ಜೈಲಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ ಜಾಲ ಪತ್ತೆ..!

Spread the love

Jail-Ganja-Supplu-Biriyani

ಬೆಂಗಳೂರು,ಡಿ.17– ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭ ವಿಸುತ್ತಿರುವ ಸ್ನೇಹಿತರ ಸಂದರ್ಶನದ ನೆಪದಲ್ಲಿ  ಒಳಗೆ ಬಂದು ಮೂಸಂಬಿ ಹಣ್ಣು,  ಮತ್ತು ಬಿರಿಯಾನಿ ಪ್ಯಾಕೇಟ್ ಹಾಗೂ ಸಣ್ಣ ಸಣ್ಣ ಪ್ಯಾಕೇಟ್‍ಗಳಲ್ಲಿ   ಗಾಂಜಾ ಸರಬರಾಜು ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿ  958 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.  ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ  ಅಶೋಕ ಎಂಬಾತನಿಗೆ  ಗಾಂಜಾ ಸರಬರಾಜು ಮಾಡುವ ಸಲುವಾಗಿ ಬಾಪೂಜಿನಗರದ ನವೀನ್‍ಕುಮಾರ್(26) ಮತ್ತು ಸಂಜಯ್(20) ಎಂಬುವರು   ಯಾರಿಗೂ ಗೊತ್ತಾಗದ ರೀತಿಯಲ್ಲಿ ಮೂಸಂಬಿ ಹಣ್ಣುಗಳನ್ನು ಕೊರೆದು ಒಳತಿರುಳನ್ನು ತೆಗೆದು ರಂಧ್ರದ ಮೂಲಕ ಹಣ್ಣಿನ ಒಳಭಾಗದಲ್ಲಿ ಮಾದಕ ವಸ್ತು ಗಾಂಜಾ ತುಂಬಿ ಕಾರಾಗೃಹದ ಒಳಗೆ ಸಾಗಿಸಲು ಯತ್ನಿಸುತ್ತಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಇನ್‍ಸ್ಪೆಕ್ಟರ್ ಪ್ರಶಾಂತ್ ಬಾಬು ಅವರು ಉಪಪೊಲೀಸ್ ಕಮೀಷನರ್ ಡಾ.ಬೋರಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಲಕ್ಷ್ಮಿನಾರಾಯಣ ನೇತೃತ್ವದಲ್ಲಿ ಕಾರಾಗೃಹದ ಬಳಿ ವಾಹನಗಳನ್ನು ಮತ್ತು ಸಂದರ್ಶಕರನ್ನು ತಪಾಸಣೆ ಮಾಡುವ ಸ್ಥಳದಲ್ಲಿ  ನವೀನ್‍ಕುಮಾರ್ ಹಾಗೂ ಸಂಜಯ್‍ನನ್ನು ಬಂಧಿಸಿ 402 ಗ್ರಾಂ. ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬಿರಿಯಾನಿ ಪ್ಯಾಕೇಟ್‍ನಲ್ಲಿ ಗಾಂಜಾ:

ಮತ್ತೊಂದು ಪ್ರಕರಣದಲ್ಲಿ  ಕಾರಾಗೃಹದಲ್ಲಿರುವ ಅಭಿಲಾಷ  ಎಂಬಾತನಿಗೆ ಬಿರಿಯಾನಿ ಪ್ಯಾಕೆಟ್‍ನಲ್ಲಿ ಬಚ್ಚಿಟ್ಟುಕೊಂಡು ಕಾರಾಗೃಹದೊಳಗೆ ಗಾಂಜಾ  ಸಾಗಿಸಲು ಯತ್ನಿಸುತ್ತಿದ್ದ   ಆಸ್ಟಿನ್‍ಟೌನ್ ನಿವಾಸಿ ಸಂಜು ಎಂಬಾತನನ್ನು ಬಂಧಿಸಿ 406 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಪ್ಯಾಕೆಟ್‍ಗಳಲ್ಲಿ ಗಾಂಜಾ ಸರಬರಾಜು:

ಕೇಂದ್ರ ಕಾರಾಗೃಹದ ಬಳಿ  ಬಂಧಿಗಳನ್ನು ತಪಾಸಣೆ ಮಾಡುವ ಸ್ಥಳದಲ್ಲಿ  ಚಿಕ್ಕಬೇಗೂರು ರಸ್ತೆ ನಿವಾಸಿ ಬಾಲರಾಜು ಎಂಬಾತ ಕಾರಾಗೃಹದಲ್ಲಿ ವಿಚಾರಣಾ ಬಂಧಿಯಾಗಿರುವ ಸ್ನೇಹಿತ ಮೇಘರಾಜನಿಗೆ ಪ್ಯಾಕೆಟ್‍ಗಳಲ್ಲಿ ತಂದಿದ್ದ ಗಾಂಜಾವನ್ನು ನೀಡಲು ಹೋಗಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದು , ಈತನಿಂದ 150 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.  ಈ ಪತ್ತೆ ಕಾರ್ಯವನ್ನು  ನಗರ ಪೊಲೀಸ್ ಆಯುಕ್ತರು ಹಾಗೂ ಅಪರ ಪೊಲೀಸ್ ಆಯುಕ್ತರು  ಶ್ಲಾಘಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin