ಮೆಕ್ಸಿಕೋದಲ್ಲಿ ಭಾರೀ ಭೂಕಂಪ, ಸುನಾಮಿಗೆ ಹಲವರ ಸಾವು
ಮೆಕ್ಸಿಕೋ ಸಿಟಿ, ಸೆ.8-ದಕ್ಷಿಣ ಮೆಕ್ಸಿಕೋ ಕರಾವಳಿಯಲ್ಲಿ ಇಂದು ಭಾರೀ ಭೂಕಂಪ ಸಂಭವಿಸಿದ್ದು, ಸಾವು-ನೋವು ಉಂಟಾಗಿದೆ. 10 ಅಡಿಗಳಿಗೂ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸುವ ಎಚ್ಚರಿಕೆ ನೀಡಿದ್ದರಿಂದ ಆತಂಕ ಸೃಷ್ಟಿಯಾಗಿದೆ. ಮೆಕ್ಸಿಕೋ ಸಿಟಿಯಲ್ಲಿಯೂ ಪ್ರಬಲ ಭೂಕಂಪದ ಅನುಭವವಾಗಿದೆ. ಕಟ್ಟಡಗಳು ಕಂಪಿಸಿದ್ದು, ಭಯಭೀತರಾದ ಜನರು ರಸ್ತೆಗಳಿಗೆ ಓಡಿ ಬಂದು ಕಂಗಾಲಾಗಿದ್ದಾರೆ. ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 8.0ರಷ್ಟು ದಾಖಲಾಗಿದ್ದು, ಇದರ ಕೇಂದ್ರ ಬಿಂದು ಗ್ವಾಟೆಮಾಲಾ ಸಮೀಪದ ದಕ್ಷಿಣ ಚಿಯಾಪಾಸ್ ರಾಜ್ಯದ ಟಪಾಚುಲಾದ ಪೂರ್ವಕ್ಕೆ 165 ಕಿ.ಮೀ. ದೂರದಲ್ಲಿತ್ತು. ಭೂಮಿಯಂದ 35 ಕಿ.ಮೀ. ಆಳದಲ್ಲಿ ಭೂಕಂಪವಾಗಿದೆ ಎಂದು ಅಮೆರಿಕ ಭೂಗರ್ಭ ಸರ್ವೇಕ್ಷಣಾ ಸಂಸ್ಥೆ ತಿಳಿಸಿದೆ.
ಭೂಕಂಪದಿಂದಾಗಿ ಗ್ವಾಟೆಮಾಲಾ, ಹೊಂಡುರಸ್, ಮೆಕ್ಸಿಕೋ, ಎಲ್ ಸಲ್ವಾಡಾರ್ ಮತ್ತು ಕೋಸ್ಟಾರಿಕಾ ಸೇರಿದಂತೆ ಮಧ್ಯ ಅಮೆರಿಕದ ಹಲವಾರು ದೇಶಗಳಲ್ಲಿ ಸುನಾಮಿ ಅಪ್ಪಳಿಸುವ ಎಂದು ಅಮೆರಿಕದ ಸುನಾಮಿ ಎಚ್ಚರಿಕೆ ವ್ಯವಸ್ಥೆ ಮುನ್ನೆಚ್ಚರಿಕೆ ನೀಡಿದೆ.