ಮೆಕ್ಸಿಕೋ ಪಟಾಕಿ ಮಾರ್ಕೆಟ್’ನಲ್ಲಿ ಅಗ್ನಿ ದುರಂತ, 30ಕ್ಕೂ ಹೆಚ್ಚು ಮಂದಿ ಸಾವು

ಮೆಕ್ಸಿಕೊ ಸಿಟಿ, ಡಿ.21-ಪಟಾಕಿಗಳ ಮಾರುಕಟ್ಟೆಯಲ್ಲಿ ಭಾರೀ ಸ್ಫೋಟದಿಂದಾಗಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಭೀಕರ ಘಟನೆ ಮೆಕ್ಸಿಕೊ ರಾಜಧಾನಿಯ ಹೊರವಲಯದಲ್ಲಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ 75ಕ್ಕೂ ಹೆಚ್ಚು ಜನ ತೀವ್ರಗಾಯಗೊಂಡಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.  ಮೆಕ್ಸಿಕೊ ಸಿಟಿಯಿಂದ ಉತ್ತರಕ್ಕೆ 32 ಕಿ.ಮೀ. ದೂರದಲ್ಲಿರುವ ಟುಲ್ಟೆಪೆಕ್‍ನ ಸ್ಯಾನ್ ಪಬ್ಲಿಟೋ ಫೈರ್‍ವಕ್ರ್ಸ್ ಮಾರುಕಟ್ಟೆಯಲ್ಲಿ ಈ ಭಾರೀ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ತುರ್ತುಸೇವೆಗಳ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದಿಂದಾಗಿ ದೇಹಗಳು ಛಿದ್ರ ಛಿದ್ರವಾಗಿ ಇಡೀ ಪ್ರದೇಶದಲ್ಲಿ ಸಿಡಿದಿದ್ದು, ಭೀಭತ್ಸಕರವಾಗಿದೆ.

ಸ್ಫೋಟದಲ್ಲಿ 75ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಟುಲ್ಟೆಪೆಕ್ ಎಮೆರ್‍ಜೆನ್ಸಿ ಸರ್ವಿಸ್‍ನ ಮುಖ್ಯಸ್ಥ ಇಸಿಡ್ರೋ ಸ್ಯಾನ್‍ಸೆಜ್ ಹೇಳಿದ್ದಾರೆ.  ಸ್ಫೋಟದಿಂದಾಗಿ ಬಹು-ವರ್ಣದ ಪಟಾಕಿಗಳು ಭಾರೀ ಶಬ್ದದೊಂದಿಗೆ ಎಲ್ಲ ದಿಕ್ಕುಗಳಲ್ಲೂ ಆಸ್ಫೋಟಗೊಂಡು ಇಡೀ ಪ್ರದೇಶ ಧೂಮಾವೃತವಾದ ದೃಶ್ಯವನ್ನು ಸ್ಥಳೀಯ ಟೆಲಿವಿಷನ್ ಬಿತ್ತರಿಸಿದೆ.  ಅನೇಕ ಅಂಗಡಿ-ಮುಂಗಟ್ಟುಗಳು ಮತ್ತು ಕಟ್ಟಡಗಳು ಸುಟ್ಟು ಕರಕಲಾಗಿರುವ ದೃಶ್ಯಗಳು ವೈಮಾನಿಕ ಫುಟೇಜ್‍ನಿಂದ ಕಂಡಬಂದಿವೆ.  2005ರಲ್ಲಿ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಇದೇ ಮಾರುಕಟ್ಟೆಯಲ್ಲಿ ಭಾರೀ ಪಟಾಕಿ ಸ್ಫೋಟ ಸಂಭವಿಸಿ ಅನೇಕರು ಗಾಋಗೊಂಡಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin