ಮೇಟಿ ರಾಸಲೀಲೆ ಪ್ರಕರಣ : ತೀವ್ರಗೊಂಡ ಸಿಐಡಿ ತನಿಖೆ
ಬಾಗಲಕೋಟೆ, ಡಿ.27- ಮಾಜಿ ಸಚಿವ ಎಚ್.ವೈ.ಮೇಟಿಯವರ ರಾಸಲೀಲೆ ಪ್ರಕರಣದ ಸಿಐಡಿ ತನಿಖೆ ತೀವ್ರಗೊಂಡಿದೆ. ಬಾಗಲಕೋಟೆ ನವನಗರ ಪೊಲೀಸ್ ಠಾಣೆಯಲ್ಲಿ ನಿನ್ನೆಯಿಂದ ಬೀಡು ಬಿಟ್ಟಿರುವ ಸಿಐಡಿ ತಂಡ ತನಿಖೆಯನ್ನು ತೀವ್ರಗೊಳಿಸಿದೆ. ವಿಜಯಲಕ್ಷ್ಮಿ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನನ್ನು ಅಪಹರಿಸಿ ಬಲವಂತವಾಗಿ ಹೇಳಿಕೆ ದಾಖಲಿಸಲಾಗಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಡಿಎಆರ್ ಪೇದೆ ಸುಭಾಷ್ ಮುಗುಳಕೋಡ ಸೇರಿದಂತೆ ನಾಲ್ವರ ವಿರುದ್ಧ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಬಾಗಲಕೋಟೆಯ ಜಿಲ್ಲಾಸ್ಪತ್ರೆ, ನವನಗರ ಠಾಣೆ ಮುಂತಾದೆಡೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ.
ವಿಜಯಲಕ್ಷ್ಮಿ ಅವರನ್ನು ಅಪಹರಿಸಿ ಗೋದಾಮೊಂದರಲ್ಲಿ ಬಲವಂತವಾಗಿ ಕೂಡಿ ಹಾಕಿ ಹೇಳಿಕೆ ಪಡೆಯಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಗೋದಾಮಿಗೂ ಭೇಟಿ ನೀಡಿ ತಂಡ ಪರಿಶೀಲನೆ ನಡೆಸಿದೆ. ಸುಭಾಷ್ ಮುಗುಳಕೋಡ ಹಾಗೂ ನಾಲ್ವರ ಬಗ್ಗೆ ಮಾಹಿತಿ ಕಲೆ ಹಾಕಿದೆ. ಅಬಕಾರಿ ಸಚಿವರಾಗಿದ್ದ ಎಚ್.ವೈ.ಮೇಟಿಯವರು ರಾಸಲೀಲೆ ಆರೋಪ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಗಿತ್ತು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣವನ್ನು ಸಿಐಡಿಗೆ ವಹಿಸಿದ್ದರು.
ಸಂತ್ರಸ್ತೆ ವಿಡಿಯೋದಲ್ಲಿರುವ ಮಹಿಳೆ ನಾನಲ್ಲ ಎಂದು ಹೇಳಿಕೆ ನೀಡಿದ್ದರೂ ನಂತರ ಹೇಳಿಕೆ ಬದಲಾಯಿಸಿ ಅದರಲ್ಲಿರುವುದು ನಾನೇ ಎಂದು ಹೇಳಿದ್ದರು. ನಂತರ ಠಾಣೆಗೆ ದೂರು ನೀಡಿ ಬಲವಂತವಾಗಿ ನನ್ನನ್ನು ಅಪಹರಿಸಿ ಹೇಳಿಕೆ ಪಡೆಯಲಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಐಡಿ ಡಿವೈಎಸ್ಪಿ ಪಿ.ರವಿಶಂಕರ್ ನೇತೃತ್ವದ ತಂಡ ಮಹಿಳೆ ನೀಡಿದ ದೂರಿನ ಬಗ್ಗೆ ಮಾಹಿತಿ ಸಂಗ್ರಹಿಸಿ ತನಿಖೆ ನಡೆಸುತ್ತಿದೆ. ಒಟ್ಟಾರೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.