ಮೇಟಿ ಸೆಕ್ಸ್ ಸಿಡಿ ಬಗ್ಗೆ ಸಿಐಡಿ ತನಿಖೆ ಇಲ್ಲ, ವಿಚಾರಣೆ ಅಷ್ಟೇ : ಪರಮೇಶ್ವರ್

Meti-01

ಬೆಂಗಳೂರು, ಡಿ.16- ಮಾಜಿ ಸಚಿವ ಎಚ್.ವೈ.ಮೇಟಿ ಅವರ ಮೇಲಿನ ರಾಸಲೀಲೆ ಆರೋಪದ ಪ್ರಕರಣದ ಬಗ್ಗೆ ಸಿಐಡಿಯಿಂದ ತನಿಖೆ ನಡೆಸುತ್ತಿಲ್ಲ. ಕೇವಲ ವಿಚಾರಣೆ ಮಾತ್ರ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ವಿಕಾಸಸೌಧದ ತಮ್ಮ ಕಚೇರಿಯಲ್ಲಿ 60ನೆ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದ ಲಾಂಛನ ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಯಾವುದೇ ಠಾಣೆಯಲ್ಲೂ ಕೂಡ ಮೇಟಿಯವರ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರೂ ನಾಪತ್ತೆಯಾಗಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿಲ್ಲ. ಸಿಐಡಿಗೆ ಸ್ವಾತಂತ್ರ್ಯವಿದೆ. ಅವರು ಯಾರನ್ನಾದರೂ ವಿಚಾರಣೆ ಮಾಡಬಹುದು. ಮೇಟಿಯವರು ಶಾಸಕರಾಗಿರುವುದರಿಂದ ಅವರ ವಿರುದ್ಧ ತಾವು ಕ್ರಮ ಕೈಗೊಳ್ಳಲು ಬರುವುದಿಲ್ಲ. ಎಲ್ಲವನ್ನೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗಮನಕ್ಕೆ ತರಲಾಗುವುದು. ಹೈಕಮಾಂಡ್ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೇಟಿಯವರು ಸಾಮಾನ್ಯ ಕಾರ್ಯಕರ್ತರಲ್ಲ. ಅವರು ಜನಪ್ರತಿನಿಧಿಯಾಗಿರುವುದರಿಂದ ಹೈಕಮಾಂಡ್ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಕ್ರಮ ಹಣ ಸಂಪಾದನೆ ಬಗ್ಗೆ ಸಚಿವ ಡಾ.ಎಚ್.ಸಿ.ಮಹದೇವಪ್ಪನವರ ಪಾತ್ರ ಕುರಿತಂತೆ ಆರೋಪ ಬಂದಿರುವ ಬಗ್ಗೆಯಾಗಲಿ, ಜಾರಿ ನಿರ್ದೇಶನಾಲಯದಿಂದಲೂ ಯಾವುದೇ ಮಾಹಿತಿ ಬಂದಿಲ್ಲ. ಸರ್ಕಾರದ ಅಧಿಕಾರಿಗಳ ಬಳಿ ದೊರೆತ ಅಕ್ರಮ ಹಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ತಮ್ಮ ಬಳಿ ಇಲ್ಲ. ಸಚಿವರಿಗೆ ಇಡಿ ನೋಟಿಸ್ ನೀಡಿದೆ ಎಂಬ ಊಹಾಪೋಹಗಳಿಗೆ ಉತ್ತರಿಸಲಾಗುವುದಿಲ್ಲ ಎಂದು ತಳ್ಳಿಹಾಕಿದರು.

ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಆದಾಯ ತೆರಿಗೆ ಕ್ರಮ ಕೈಗೊಳ್ಳುತ್ತಿದೆ. ಅದರಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಉದ್ದೇಶಪೂರ್ವಕವಾಗಿ ಕೇಂದ್ರ ಸರ್ಕಾರ ಕಾಂಗ್ರೆಸ್‍ಅನ್ನು ಟಾರ್ಗೆಟ್ ಮಾಡಿದೆಯೇ ಎಂಬುದು ಗೊತ್ತಿಲ್ಲ ಎಂದರು.
ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ನಾಳೆ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ನೋಟು ರದ್ದತಿಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ರಾಹುಲ್‍ಗಾಂಧಿಯವರು ಸಾರ್ವಜನಿಕ ಸಭೆಯಲ್ಲಿ ಉಲ್ಲೇಖಿಸುವ ಸಾಧ್ಯತೆ ಇದೆ. ಐಪಿಎಸ್ ಅಧಿಕಾರಿ ನೀಲಮಣಿ ರಾಜು ಅವರ ಸೇವಾ ದಾಖಲೆ ಪುಸ್ತಕ ಕಾಣೆಯಾಗಿರುವ ಮಾಹಿತಿಯೂ ತಮ್ಮ ಗಮನಕ್ಕೆ ಬಂದಿಲ್ಲ. ಕೇಂದ್ರ ಸರ್ಕಾರದ ಬಳಿ ಎಲ್ಲ ದಾಖಲೆಗಳೂ ಇರುತ್ತವೆ. ಅಗತ್ಯಬಿದ್ದರೆ ತರಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆಯುವ ಅಖಿಲ ಭಾರತ ಪೊಲೀಸ್ ಕರ್ತವ್ಯಕೂಟದ ಲಾಂಛನವನ್ನು ಹೊಸದಾಗಿ ಬಿಡುಗಡೆ ಮಾಡಲಾಗಿದೆ. ಮೊದಲ ಬಾರಿಗೆ ಮೈಸೂರಿನಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿದೆ. ಐದು ದಿನಗಳ ಕಾರ್ಯಕ್ರಮದಲ್ಲಿ 1237 ಪೊಲೀಸರು ಭಾಗಿಯಾಗಲಿದ್ದಾರೆ. ವಿವಿಧ ಕ್ರೀಡೆಗಳನ್ನು ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದೆ ಎಂದರು.

>  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin