ಮೇಲ್ಮನೆಗೆ ನಾಮನಿರ್ದೇಶಿತ ಸದಸ್ಯರ ನೇಮಕ, ರಾಜ್ಯಪಾಲರಿಗೆ ಪಟ್ಟಿ ರವಾನೆ..!

List--Moha-Kondajji

ಬೆಂಗಳೂರು, ಏ.25- ಮಾಜಿ ಮೇಯರ್ ಪಿ.ಆರ್.ರಮೇಶ್, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕಾಂಗ್ರೆಸ್ ಹಿರಿಯ ಮುಖಂಡ ಮೋಹನ್ ಕೊಂಡಜ್ಜಿ ಅವರನ್ನು ಮೇಲ್ಮನೆ ನಾಮಕರಣ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯಪಾಲರ ಅಂಗೀಕಾರಕ್ಕೆ ಶಿಫಾರಸು ಮಾಡಿ ರವಾನಿಸಲಾಗಿದೆ.  ಬಹುದಿನಗಳಿಂದ ಖಾಲಿ ಉಳಿದಿದ್ದ ಮೂವರು ನಾಮನಿರ್ದೇಶಿತ ಸದಸ್ಯರ ನೇಮಕ ಮಾಡಿರುವ ಸರ್ಕಾರ ಶಿಫಾರಸ್ಸು ಅಂಗೀಕಾರಕ್ಕೆ ರಾಜಭವನಕ್ಕೆ ಕಳುಹಿಸಿಕೊಟ್ಟಿದೆ.  ವಿಶ್ವಕರ್ಮ ಸಮುದಾಯದ ಮುಖಂಡ, ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ.ನಂಜುಂಡಿ ಅವರು ಮೇಲ್ಮನೆ ಸದಸ್ಯರಾಗುವ ಕನಸು ಭಗ್ನವಾಗಿದೆ.ಕೊನೆಯ ಕ್ಷಣದಲ್ಲಿ ಅವರ ಹೆಸರನ್ನು ಕೈ ಬಿಡಲಾಗಿದ್ದು, ಅವರ ಬದಲಿಗೆ ಹಿಂದುಳಿದ ವರ್ಗದ ಮುಖಂಡರಾದ ಮಾಜಿ ಮೇಯರ್ ಪಿ.ಆರ್.ರಮೇಶ್ ಅವರಿಗೆ ಮೇಲ್ಮನೆಯಲ್ಲಿ ಸ್ಥಾನ ಕಲ್ಪಿಸಲಾಗಿದೆ.  ಖಾಲಿ ಉಳಿದಿದ್ದ ಮೂವರು ಸದಸ್ಯರ ನೇಮಕಕ್ಕೆ ಭಾರೀ ಲಾಬಿ ನಡೆದಿತ್ತು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಪರಮಾಪ್ತ ರಾಜಕೀಯ ಕಾರ್ಯದರ್ಶಿ ಜಿ.ಸಿ.ಚಂದ್ರಶೇಖರ್ ಅವರ ಹೆಸರು ಕೂಡ ಪ್ರಬಲವಾಗಿ ಕೇಳಿಬಂದಿತ್ತು.

ಸಾಹಿತಿ ಬರಗೂರು ರಾಮಚಂದ್ರಪ್ಪ, ಕೆ.ಮರುಳಸಿದ್ದಯ್ಯ, ಕೆ.ಬಿ.ಸಿದ್ದಯ್ಯ, ಚಿತ್ರನಟಿ ಭಾವನಾ, ರಾಣಿ ಸತೀಶ್, ಬಿ.ಎಲ್.ಶಂಕರ್, ಎಸ್.ಜಿ.ಸಿದ್ದರಾಮಯ್ಯ ಅವರು ಕೂಡ ಮೇಲ್ಮನೆ ಪ್ರವೇಶಿಸಲು ಪ್ರಯತ್ನ ನಡೆಸಿದ್ದರು. ಆದರೆ, ಹೈಕಮಾಂಡ್ ಲಿಂಗಾಯತ ಸಮುದಾಯದ ಮುಖಂಡ ಮೋಹನ್ ಕೊಂಡಜ್ಜಿ, ಒಕ್ಕಲಿಗರ ಸಮುದಾಯದ ಪ್ರಭಾವಿ ನಾಯಕ ಶಿವಕುಮಾರ್ ಅವರ ಶಿಫಾರಸಿನ ಅಭ್ಯರ್ಥಿ ಸಿ.ಎಂ.ಲಿಂಗಪ್ಪ ಹಾಗೂ ಹಾಗೂ ಹಿಂದುಳಿದ ವರ್ಗದ ಮುಖಂಡ ತಿಗಳ ಸಮುದಾಯದ ಪಿ.ಆರ್.ರಮೇಶ್ ಅವರನ್ನು ನೇಮಕ ಮಾಡಲಾಗಿದೆ.  ಮೇಲ್ಮನೆಯ ಈ ನೇಮಕದಿಂದ ಕಾಂಗ್ರೆಸ್‍ನಲ್ಲಿ ಭಿನ್ನಮತ ಉಂಟಾಗುವ ಸಾಧ್ಯತೆಯಿದೆ. ಈ ಸ್ಥಾನಗಳನ್ನು ಪಡೆಯಲು ಭಾರೀ ಪೈಪೋಟಿ ನಡೆದಿತ್ತು. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವರು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಮೇಲ್ಮನೆಗೆ ನೇಮಿಸಲು ತೀವ್ರ ಕಸರತ್ತು ನಡೆಸಿದ್ದರು.

ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಹೈಕಮಾಂಡ್‍ನಿಂದ ಅನುಮತಿ ಪಡೆದು ರಾಜಭವನಕ್ಕೆ ಪಟ್ಟಿ ರವಾನಿಸಿದ್ದಾರೆ. ಕಳೆದ ಬಾರಿ ಮೇಲ್ಮನೆಗೆ ಸದಸ್ಯರ ಆಯ್ಕೆ ಸಂದರ್ಭದಲ್ಲಿ ರಾಣಿ ಸತೀಶ್ ಅವರ ಹೆಸರು ಅಂತಿಮಗೊಂಡಿತ್ತು. ಆದರೆ, ಕೊನೆ ಕ್ಷಣದಲ್ಲಿ ಜಯಮ್ಮ ಅವರನ್ನು ಆಯ್ಕೆ ಮಾಡಲಾಯಿತು.  ಸಾಕಷ್ಟು ಅಳೆದು ತೂಗಿ ವರ್ಷ ಕಳೆದ ನಂತರ ಮೇಲ್ಮನೆಗೆ ನಾಮಕರಣ ಸದಸ್ಯರ ನೇಮಕವಾಗುತ್ತಿದೆ. ರಾಜ್ಯಪಾಲರ ಅಂಗೀಕಾರ ದೊರೆತರೆ ಮುಂಬರುವ ಅಧಿವೇಶನದಲ್ಲಿ ಮೇಲ್ಮನೆಯಲ್ಲಿ ಕಾಂಗ್ರೆಸ್ ಸದಸ್ಯಬಲ ಹೆಚ್ಚಾಗುತ್ತದೆ. ಸದ್ಯ ಮೇಲ್ಮನೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯೊಂದಿಗೆ ಸಭಾಪತಿ, ಉಪಸಭಾಪತಿ ನೇಮಕವಾಗಿದ್ದಾರೆ.   ಮೇಲ್ಮನೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಏರ್ಪಡುವ ಸಾಧ್ಯತೆಯಿದ್ದು, ಇದು ಯಶಸ್ವಿಯಾದರೆ ಸಭಾಪತಿ ಡಿ.ಎಚ್.ಶಂಕರಮೂರ್ತಿಯವರು ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin