ಮೇಲ್ಮನೆಯಲ್ಲಿ ಅಗಲಿದ ಗಣ್ಯರಿಗೆ ಸದನ ಸಂತಾಪ

Session--001

ಬೆಂಗಳೂರು, ಜೂ.5– ವಿಧಾನಪರಿಷತ್ ಮಾಜಿ ಉಪಸಭಾಪತಿ ಹಾಗೂ ಹಾಲಿ ಸದಸ್ಯರಾಗಿದ್ದ ವಿಮಲಾಗೌಡ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ಹೋ ಶ್ರೀನಿವಾಸಯ್ಯ, ಪಾರ್ವತಮ್ಮ ರಾಜ್‍ಕುಮಾರ್, ಹಿರಿಯ ಪತ್ರಕರ್ತ ಗರುಡನಗಿರಿ ನಾಗರಾಜ್, ಸಂಸ್ಕೃತ ವಿದ್ವಾಂಸ ಪ್ರೊ.ಕೆ.ಟಿ.ಪಾಂಡುರಂಗಿ ಅವರಿಗೆ ಮೇಲ್ಮನೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಸಂತಾಪ ಸೂಚಕ ನಿರ್ಣಯ ಮಂಡಿಸಿದ ಸಭಾಪತಿ ಡಿ.ಎಚ್.ಶಂಕರ ಮೂರ್ತಿ ಅವರು, ಮೃತರ ಗುಣಗಾನ ಮಾಡಿ ಗೌರವ ವ್ಯಕ್ತಪಡಿಸಿದರು. ವಿಧಾನಪರಿಷತ್‍ನ ಮಾಜಿ ಉಪಸಭಾಪತಿ, ಪರಿಷತ್‍ನ ಹಿರಿಯ ಸದಸ್ಯೆ ಆಗಿದ್ದ ವಿಮಲಾಗೌಡ ಅವರು ಮಹಿಳೆ ಮತ್ತು ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಮಹಿಳೆಯರ ಮೇಲಿನ ದೌರ್ಜನ್ಯ, ಆನ್‍ಲೈನ್ ಲಾಟರಿ ನಿಷೇಧ, ಲೈವ್ ಬ್ಯಾಂಡ್‍ಗೆ ಕಡಿವಾಣ ಹಾಕುವ ಹೋರಾಟ ಗಳಲ್ಲಿ ಭಾಗವಹಿಸಿದ್ದರು. ಅವರ ನಿಧನದಿಂದ ಸರಳ, ಸಜ್ಜನ ರಾಜಕಾರಣಿ ಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ದುಃಖ ವ್ಯಕ್ತಪಡಿಸಿದರು.ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾಗಿದ್ದ ಹೋ.ಶ್ರೀನಿವಾಸ್‍ಯ್ಯನವರು ವಿಧಾನಸೌಧ, ವಿಕಾಸಸೌಧದ ನಡುವೆ ಗಾಂಧಿ ಪ್ರತಿಮೆ ಸ್ಥಾಪಿಸುವ ಸಂದರ್ಭದಲ್ಲಿ ಹಲವು ಮಹತ್ವದ ಸಲಹೆಗಳನ್ನು ನೀಡಿದ್ದರು. ಮಹಾತ್ಮಗಾಂಧೀಜಿ ಅವರ ತತ್ವಗಳಿಗೆ ಅನುಸಾರವಾಗಿ ಸರ್ಕಾರ, ನವೋದಯ, ಗ್ರಾಮೋದ್ಧಾರ, ಮದ್ಯಪಾನ ನಿಷೇಧ, ಶಿಕ್ಷಣ, ಪ್ರಕೃತಿ ಚಿಕಿತ್ಸೆ ಮತ್ತಿತರ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಅವರು ಕರ್ನಾಟಕ ಗಾಂಧಿ ಎಂದೇ ಹೆಸರಾಗಿದ್ದರು.

20 ಸಾವಿರ ಶಾಲಾ-ಕಾಲೇಜುಗಳಲ್ಲಿ ಗಾಂಧಿಕುರಿತು ಪ್ರವಚನ ನೀಡಿ 200ಕ್ಕೂ ಹೆಚ್ಚು ಗಾಂಧಿ ಅಧ್ಯಯನ ಕೇಂದ್ರ ಸ್ಥಾಪನೆಗೆ ಕಾರಣರಾಗಿದ್ದರು. ಇವರ ನಿಧನದಿಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೊಬ್ಬರನ್ನು ಕಳೆದುಕೊಂಡಿದ್ದೇವೆ ಎಂದರು. ಪೂರ್ಣಿಮ ಎಂಟರ್ ಪ್ರೈಸಸ್ ಮೂಲಕ ಹಲವು ನಟ- ನಟಿಯರನ್ನು ಚಿತ್ರರಂಗಕ್ಕೆ ನೀಡಿದ ಪಾರ್ವತಮ್ಮ ಅವರು ಶಕ್ತಿಯಾಗಿ ಬೆಳೆದಿದ್ದರು ಎಂದರು. ನೇರ, ನಿಷ್ಠೂರ ವರದಿಗೆ ಹೆಸರಾಗಿದ್ದ ಹಿರಿಯ ಪತ್ರಕರ್ತ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ, ಐದು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದ ಗರುಡನಗಿರಿ ನಾಗರಾಜ್ ಅವರ ನಿಧನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಬೆಂಗಳೂರು ವಿವಿ ಸಂಸ್ಕøತ ವಿಭಾಗದ ಮುಖ್ಯಸ್ಥರಾಗಿದ್ದ ಪಾಂಡು ರಂಗಿ ಅವರು, ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದರು. ವಿದ್ವಾಂಸ ರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದರು.ವಿಪಕ್ಷ ನಾಯಕ ಈಶ್ವರಪ್ಪ ಹಾಗೂ ಪರಮೇಶ್ವರ್ ಮೃತರ ಗುಣಗಾನ ಮಾಡಿದರು. ಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಗೌರವಾರ್ಥ ಸಲ್ಲಿಸಿ ನಾಳೆ ಮಧ್ಯಾಹ್ನ 3 ಗಂಟೆಗೆ ಪರಿಷತ್ ಕಲಾಪ ಮುಂದೂಡಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin