ಮೇ 10ರವರೆಗೂ ಮುಂದುವರೆಯಲಿದೆ ಮಳೆ

Rain--01

ಬೆಂಗಳೂರು, ಮೇ 3- ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಬೀಳುತ್ತಿರುವ ಮಳೆ ಮುಂದುವರೆಯಲಿದ್ದು, ಮೇ 5ರಿಂದ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮೇ 5ರಿಂದ 10ರವರೆಗೂ ಗುಡುಗು, ಮಿಂಚು ಹಾಗೂ ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ ಈ ಸಂಜೆಗೆ ತಿಳಿಸಿದರು.

ಭಾಗಶಃ ಮೋಡಕವಿದ ವಾತಾವರಣ ಇನ್ನೂ ಒಂದು ವಾರ ಮುಂದುವರೆಯುವ ಸಾಧ್ಯತೆಗಳಿವೆ. ವಾತಾವರಣದಲ್ಲಿ ಉಂಟಾಗಲಿರುವ ಬದಲಾವಣೆಯಿಂದ ಮೇ 10ರವರೆಗೂ ಮಳೆ ಪ್ರಮಾಣ ಹೆಚ್ಚಾಗಲಿದ್ದು, ಕೆಲವೆಡೆ ಸಾಧಾರಣ, ಮತ್ತೆ ಕೆಲವೆಡೆ ಭಾರೀ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ರಾಜ್ಯದ ಉತ್ತರ ಒಳನಾಡಿನಲ್ಲೂ ಮಳೆ ಮುಂದುವರೆಯಲಿದ್ದು, ಸಾಧಾರಣ ಇಲ್ಲವೇ ತುಂತುರು ಮಳೆಯನ್ನು ನಿರೀಕ್ಷಿಸಬಹುದಾಗಿದೆ.

ಈಗಾಗಲೇ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ಮೇ ತಿಂಗಳಿನಲ್ಲಿ ಮುಂಗಾರು ಪೂರ್ವ ಮಳೆಯಾಗುವುದು ವಾಡಿಕೆ. ಅದರಂತೆ ಮಳೆಯಾಗುತ್ತಿದೆ. ಈ ಬಾರಿ ನೈರುತ್ಯ ಮುಂಗಾರು ನಿಗದಿತ ಅವಧಿಗೆ ಪ್ರಾರಂಭವಾಗುವ ಲಕ್ಷಣಗಳಿವೆ. ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗುವ ಮುನ್ಸೂಚನೆಗಳು ಇವೆ ಎಂದು ಅವರು ತಿಳಿಸಿದರು.

Sri Raghav

Admin