ಮೈದುನನನ್ನು ಅಪಹರಿಸಿದವರ ಮೇಲೆ ಗುಂಡು ಹಾರಿಸಿದ ರಕ್ಷಿಸಿದ ರಾಷ್ಟ್ರ ಮಟ್ಟದ ಶೂಟರ್..!

National-evel--01

ನವದೆಹಲಿ, ಮೇ 29- ತನ್ನ ಗಂಡನ ತಮ್ಮನನ್ನು ಅಪಹರಿಸಿದ್ದ ದುಷ್ಕರ್ಮಿಗಳ ಮೇಲೆ ರಾಷ್ಟ್ರೀಯ ಮಟ್ಟದ ಶೂಟರ್ ಗುಂಡು ಹಾರಿಸಿ ಸುರಕ್ಷಿತವಾಗಿ ಬಿಡುಗಡೆಗೊಳಿಸಿದ ಸಿನಿಮೀಯ ಘಟನೆ ಹರ್ಯಾಣ-ದೆಹಲಿ ಗಡಿ ಪ್ರದೇಶದಲ್ಲಿ ನಡೆದಿದೆ. 33 ವರ್ಷದ ಆಯೇಷಾ ರಾಷ್ಟ್ರೀಯ ಮಟ್ಟದ ಶೂಟರ್. 2015ರಲ್ಲಿ ಚಿನ್ನದ ಪದಕ ಗೆದ್ದಿದ್ದರು. ಆರು ವರ್ಷಗಳಿಂದ ನಿಖರವಾಗಿ ಗುರಿ ಇಟ್ಟು ಗುಂಡು ಹಾರಿಸುವ ಕಲೆ ಈಕೆಗೆ ಕರಗತ. ಆಕೆಯ ಬಳಿ ಲೈಸನ್ಸ್ ರಿವಾಲ್ವಾರ್ ಇದೆ. ದುಷ್ಕರ್ಮಿಗಳಿಗೆ ಪಾಠ ಕಲಿಸಲು ಆಯೇಷಾ ಇದನ್ನು ಮೊದಲ ಬಾರಿಗೆ ಕೈಗೆತ್ತಿಕೊಳ್ಳಬೇಕಾಯಿತು.ತನ್ನ ಗಂಡನ ಸಹೋದರ 21 ವರ್ಷದ ಆಸಿಫ್ ಫಾಲಕ್ ಅರೆಕಾಲಿಕ ಟ್ಯಾಕ್ಸಿ ಡ್ರೈವರ್. ಗುರುವಾರ ರಾತ್ರಿ ಇಬ್ಬರು ವ್ಯಕ್ತಿಗಳು ಶಾಸ್ತ್ರಿನಗರಕ್ಕೆ ತೆರಳಲು ಆನ್‍ಲೈನ್‍ನಲ್ಲಿ ಟ್ಯಾಕ್ಸಿ ಬುಕ್ ಮಾಡಿದ್ದರು. ಆದರೆ ಅವರು ಫಾಲಕ್‍ನನ್ನು ಬೆದರಿಸಿ ಕಾರಿನೊಂದಿಗೆ ಹರ್ಯಾಣ ಗಡಿ ಗ್ರಾಮ ಭೋಪ್ರಾಗೆ ಬಲವಂತವಾಗಿ ಕರೆದೊಯ್ದರು. ನಂತರ ಕುಟುಂಬದವರಿಗೆ ಕರೆ ಮಾಡಿ 25,000 ರೂ.ಗಳ ಒತ್ತೆ ಹಣಕ್ಕಾಗಿ ಒತ್ತಾಯಿಸಿದರು.

ಆಯೇಷಾ ಗಂಡ ಫಾಲಕ್ ಶೇರ್ ಅಲಮ್ ಪೊಲೀಸರಿಗೆ ದೂರು ನೀಡಿದರು. ಆದರೆ ನಂತರ ದಂಪತಿಯೂ ಆ ಸ್ಥಳಕ್ಕೆ ತೆರಳಿದರು. ಆಯೇಷಾ ಮತ್ತು ಪತಿ ಇದ್ದ ಕಾರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ದುಷ್ಮರ್ಮಿಗಳು ಹಣ ವಸೂಲಿ ಮಾಡಲು ಮುಂದಾದರು. ಈ ಸಂದರ್ಭದಲ್ಲಿ ಆಯೇಷಾ ತನ್ನ ಬಳಿ ಇದ್ದ ಪಾಯಿಂಟ್ 32 ರಿವಾಲ್ವಾರ್‍ನಿಂದ ಇಬ್ಬರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಗೊಂಡ ಅಪಹರಣಕಾರರನ್ನು ಬಂಧಿಸಿದರು. ಅಯೇಷಾರ ಧೈರ್ಯ ಮತ್ತು ಸಮಯಪ್ರಜ್ಞೆ ಬಗ್ಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾರಿ ಅಬಲೆಯಲ್ಲ ಸಬಲೆ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದು ಪ್ರಶಂಸಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin