ಮೈಸೂರಲ್ಲಿ ಹೆಲಿಕಾಪ್ಟರ್ ರೈಡ್ ಆರಂಭ, ಟಿಕೆಟ್ ಬೆಲೆ ಎಷ್ಟು ಗೊತ್ತೇ ..?

Helicaptor--v01

ಮೈಸೂರು, ಸೆ.15- ದಸರಾ ಪ್ರಯುಕ್ತ ನಾಳೆಯಿಂದಲೇ ಹೆಲಿರೈಡ್‍ ಅನ್ನು ಆಯೋಜಿಸಲಾಗುವುದು ಎಂದು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ರಂದೀಪ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾಳೆಯಿಂದ ಅಕ್ಟೋಬರ್ 5ರವರೆಗೆ ಲಲಿತ್‍ಮಹಲ್ ಹೆಲಿಪ್ಯಾಡ್‍ನಲ್ಲಿ ಹೆಲಿರೈಡ್ ಅನ್ನು ಆಯೋಜಿಸಲಾಗಿದ್ದು, ನಾಳೆ ಬೆಳಗ್ಗೆ 10.30ಕ್ಕೆ ಉದ್ಘಾಟನೆ ನೆರವೇರಲಿದೆ ಎಂದು ಹೇಳಿದರು.

ನಾಳೆಯಿಂದ ಅ.5ರವರೆಗೆ 10 ನಿಮಿಷಗಳ ಕಾಲ ಹೆಲಿಕಾಪ್ಟರ್‍ನಲ್ಲಿ ಮೈಸೂರಿನ ಸುತ್ತಮುತ್ತಲಿನ ವಿಹಂಗಮ ನೋಟವನ್ನು ಸವಿಯಬಹುದಾಗಿದೆ. ಒಮ್ಮೆಗೆ ಆರು ಮಂದಿಯನ್ನು ಕರೆದೊಯ್ಯಲಾಗುವುದು. ಬೆಳಗಿನಿಂದ ಸಂಜೆ 5 ಗಂಟೆವರೆಗೆ ಪವನ್‍ಹಂಸ್ ಹಾಗೂ ಚಿಪ್ಸನ್ ಏವಿಯೇಷನ್ ಸಂಸ್ಥೆಯ ಎರಡು ಹೆಲಿಕಾಪ್ಟರ್‍ಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು. ಒಬ್ಬರಿಗೆ 2300ರೂ., ವಿಶೇಷಚೇತನರಿಗೆ, ಆರು ವರ್ಷದೊಳಗಿನ ಮಕ್ಕಳಿಗೆ 2200ರೂ. ನಿಗದಿ ಪಡಿಸಲಾಗಿದೆ. ಇಂದಿನಿಂದಲೇ ಆನ್‍ಲೈನ್ ಬುಕ್ಕಿಂಗ್ ಮಾಡಬಹುದಾಗಿದೆ ಎಂದರು.

ದಸರಾ ವೆಬಸೈಟ್ www.mysoredasara.gov.in  ಹಾಗೂ ದೂರವಾಣಿ 8828122245 ಮತ್ತು 8375914948 ಮೂಲಕ ಹೆಸರು ನೋಂದಾಯಿಸಬಹುದು ಎಂದು ತಿಳಿಸಿದರು. ಪ್ಯಾಲೇಸ್ ಆನ್ ವೀಲ್ಸ್ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದು, ನಗರದಲ್ಲಿರುವ ಪ್ರಮುಖ ಅರಮನೆಗಳನ್ನು ವೀಕ್ಷಿಸಬಹುದಾಗಿದೆ.  ಮೈಸೂರು ಅರಮನೆ, ಜಗನ್ಮೋಹನ ಅರಮನೆ, ಲಲಿತಮಹಲ್, ಪ್ರಾದೇಶಿಕ ಪ್ರಾಕೃತಿಕ ವಸ್ತುಸಂಗ್ರಹಾಲಯ, ಇಂದಿರಾಗಾಂಧಿ ಮ್ಯೂಸಿಯಂ, ಚಲುವರಾಜಮ್ಮಣ್ಣಿ ಮ್ಯಾನ್ಷನ್, ರೈಲ್ವೆ ಮ್ಯೂಸಿಯಂ, ಜಯಲಕ್ಷ್ಮಿ ವಿಲಾಸ ಅರಮನೆಗಳಿಗೆ ಹವಾನಿಯಂತ್ರಿತ ಬಸ್‍ನಲ್ಲಿ ಕರೆದೊಯ್ಯಲಾಗುತ್ತದೆ. ಒಬ್ಬರಿಗೆ 999ರೂ. ನಿಗದಿಪಡಿಸಲಾಗಿದೆ.

ಬೆಳಗ್ಗೆ 10 ಗಂಟೆಯಿಂದ ಸಂಜೆ 6.30ರವರೆಗೆ ಅರಮನೆಗಳನ್ನು ವೀಕ್ಷಿಸಬಹುದು. ಪ್ರವಾಸಿಗರಿಗೆ ಲಲಿತ್‍ಮಹಲ್ ಪ್ಯಾಲೇಸ್‍ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರವಾಸದ ಕೊನೆಯಲ್ಲಿ ಪ್ರತಿಯೊಬ್ಬರಿಗೂ ಸ್ಮರಣಿಕೆ ನೀಡಲಾಗುತ್ತದೆ. ಈ ವೀಕ್ಷಣೆಗೆ ದೂರವಾಣಿ 0821-2422096 ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ರಂದೀಪ್ ತಿಳಿಸಿದರು.

Sri Raghav

Admin