ಮೈಸೂರು ಅರಮನೆಯಲ್ಲಿ ಎಂಟು ದಸರಾ ಆನೆಗಳಿಗೆ ಭವ್ಯ ಸ್ವಾಗತ

Dasara--01

ಮೈಸೂರು, ಆ.17-ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಕ್ಯಾಪ್ಟನ್ ಅರ್ಜುನ ಸೇರಿದಂತೆ ಮೊದಲ ಹಂತದ ಎಂಟು ಆನೆಗಳನ್ನು ಇಂದು ಮೈಸೂರು ಅರಮನೆಗೆ ಭವ್ಯ ಸ್ವಾಗತದಿಂದ ಬರಮಾಡಿಕೊಳ್ಳಲಾಯಿತು. ಇಲವಾಲದ ಅಲೋಕದಲ್ಲಿದ್ದ ಈ ಎಂಟು ಆನೆಗಳಿಗೆ ಸ್ನಾನ ಮಾಡಿಸಿ ಅವುಗಳಿಗೆ ಅರಿಶಿಣ, ಕುಂಕುಮ, ಹೂಗಳಿಂದ ಅಲಂಕರಿಸಿ ಅಶೋಕಪುರಂನಲ್ಲಿರುವ ಅರಣ್ಯಭವನಕ್ಕೆ ಲಾರಿಗಳ ಮೂಲಕ ಕರೆತರಲಾಯಿತು.

ಮೊದಲು ಅಲೋಕದಲ್ಲಿ ಆನೆಗಳಿಗೆ ಎಳ್ಳುಉಂಡೆ, ಗರಿಕೆ, ಬೆಲ್ಲ, ಕಬ್ಬು, ಬಾಳೆಹಣ್ಣು ತಿನ್ನಿಸಿ ರಾಜೋಪಚಾರ ನೀಡಲಾಯಿತು. ಈ ವೇಳೆ ಆನೆಗಳಿಗೆ ಪೂಜೆ ನೆರವೇರಿಸಿದ ಪುರೋಹಿತರು ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲಾ ಪೂಜೆಗಳಿಗೂ ಮೊದಲು ಗಣಪತಿ ಪೂಜೆಯನ್ನು ನೆರವೇರಿಸಿ ನಂತರ ಬೇರೆ ದೇವರಿಗೆ ಪೂಜೆ ಮಾಡಲಾಗುತ್ತದೆ. ಆನೆಗಳು ಗಣಪತಿ ಸ್ವರೂಪವಾಗಿರುವುದರಿಂದ ಈ ಗಜಪಡೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ ಮಾತನಾಡಿ, ಮೊದಲ ತಂಡದ ಆನೆಗಳು ಇಂದಿನಿಂದ ಅರಮನೆಯಲ್ಲಿ ತಂಗಲಿವೆ. ಎಲ್ಲ ಆನೆಗಳು ಆರೋಗ್ಯದಿಂದವೆ ಎಂದು ತಿಳಿಸಿದರು.

ನಂತರ ವಿಶೇಷವಾಗಿ ಶೃಂಗರಿಸಿದ ಈ ಗಜನಪಡೆಯನ್ನು ಅಶೋಕಪುರಂನಿಂದ ಜಾನಪದ ಕಲಾತಂಡದೊಂದಿಗೆ ಮೆರವಣಿಗೆ ಮೂಲಕ ಅರಮನೆ ಬಳಿಗೆ ಕರೆತರಲಾಯಿತು.  ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ , ಮೇಯರ್ ರವಿಕುಮಾರ್, ಶಾಸಕರಾದ ಸೋಮಶೇಖರ್, ವಾಸು, ಜಿಲ್ಲಾಧಿಕಾರಿ ರಂದೀಪ್, ಪಾಲಿಕೆ ಆಯುಕ್ತ ಜಗದೀಶ್, ಉಪಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ ಸೇರಿದಂತೆ ಇತರೆ ಅಧಿಕಾರಿಗಳು ಪೂಜೆ ಸಲ್ಲಿಸಿ ಗಜಪಡೆಯನ್ನು ಬರಮಾಡಿಕೊಂಡರು.

Sri Raghav

Admin