ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ

Yaduveer--01

ಮೈಸೂರು, ಸೆ.21-ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಡಹಬ್ಬ ದಸರಾಗೆ ನಿತ್ಯೋತ್ಸವ ಕವಿ ನಿಸಾರ್ ಅಹಮ್ಮದ್ ಚಾಮುಂಡಿಬೆಟ್ಟದಲ್ಲಿ ಚಾಲನೆ ನೀಡಿದರೆ. ಇತ್ತ ಮೈಸೂರು ಅರಸರ ನವರತ್ನ ಉತ್ಸವ, ಖಾಸಗಿ ದರ್ಬಾರ್ ಅರಮನೆಯಲ್ಲಿ ಪ್ರಾರಂಭವಾಯಿತು. ಯುವರಾಜ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಳಗಿನ ಜಾವ ಮಂಗಳಸ್ನಾನ ಮುಗಿಸಿ ಕಂಕಣಬದ್ಧರಾಗಿ ನವರಾತ್ರಿ ಉತ್ಸವದ ಪೂಜಾಕಾರ್ಯ ಪ್ರಾರಂಭಸಿದರು. 11.45ರ ನಂತರ ಅರಮನೆಯ ದರ್ಬಾರ್ ಸಭಾಂಗಣದಲ್ಲಿ ಮೈಸೂರು ಅರಸು ಮನೆತನದವರು ನವರಾತ್ರಿಯ ಧಾರ್ಮಿಕ ಕೈಂಕರ್ಯಗಳನ್ನು ಕೈಗೊಂಡರು. ಮೊದಲು ಕಳಶಪೂಜೆ, ಗಣಪತಿ ಪೂಜೆ ನಂತರ ನವಗ್ರಹ ಪೂಜೆ ನೆರವೇರಿಸಿ ರತ್ನಖಚಿತ ಸಿಂಹಾಸನಕ್ಕೆ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ಮಾಡಲಾಯಿತು. ತದನಂತರ ಸಿಂಹಾಸನಕ್ಕೆ ಸಿಂಹಗಳನ್ನು ಜೋಡಿಸಲಾಯಿತು.

ಸಿಂಹಾಸನಕ್ಕೆ ನಮಸ್ಕರಿಸಿ ಯಧುವೀರರು ಸಿಂಹಾಸನಾರೂಢರಾದರು. ಈ ಸಂದರ್ಭದಲ್ಲಿ ಅರಮನೆಯ ಆವರಣದಲ್ಲಿರುವ ಎಲ್ಲ ದೇವಾಲಯಗಳು, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ, ನಗರದಲ್ಲಿರುವ ಕೆಲವು ಪ್ರಮುಖ ದೇವಾಲಯಗಳು, ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ, ಶೃಂಗೇರಿಯ ಶಾರದಾಪೀಠ, ಮೇಲುಕೋಟೆಯ ಚೆಲುವನಾರಾಯಣ ಸೇರಿದಂತೆ ತಮಿಳುನಾಡಿನ ಕೆಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ತರಲಾಗಿದ್ದ ತೀರ್ಥಪ್ರಸಾದವನ್ನು ಯಧುವೀರ ಖಾಸಗಿ ದರ್ಬಾರ್ ನಡೆಸಿದರು. ಈ ಸಂದರ್ಭದಲ್ಲಿ ಮೈಸೂರು, ರಾಜ್ಯ, ದೇಶದ ಬಗ್ಗೆ ಉಭಯ ಕುಶಲೋಪರಿ ಮಾಹಿತಿ ಪಡೆದರು.

ಆನಂತರ ತಮ್ಮ ಪತ್ನಿ ತ್ರಿಷಿಕಾ ಅವರಿಗೆ ದೇವರ ಪ್ರಸಾದ ನೀಡಿದರು. ದರ್ಬಾರ್ ಮುಗಿದ ನಂತರ ತ್ರಿಷಿಕಾ ಅವರು ಯಧುವೀರ್ ಅವರಿಗೆ ಆರತಿ ಬೆಳಗಿದರು. ನಂತರ ಯಧುವೀರ್ ಅವರು ಕುಲದೇವತೆ ಚಾಮುಂಡೇಶ್ವರಿದೇವಿಗೆ ದಸರಾ ಪ್ರಯುಕ್ತ ಪೂಜೆ ಸಲ್ಲಿಸಿ ನೈವೇದ್ಯ ಮಾಡಿ ದೇವಿಯನ್ನು ಆರಾಧಿಸಿದರು. ವಿಜಯದಶಮಿವರೆಗೂ ಯಧುವೀರ್ ಅವರು ಖಾಸಗಿ ದರ್ಬಾರ್ ನಡೆಸುವರು.

Sri Raghav

Admin