ಮೊಬೈಲ್ ಹಗರಣ ಹರಿರಾಗಿರುವಾಗಲೇ ಮೈಸೂರು ಪಾಲಿಕೆ ಸದಸ್ಯರ ಕಾರು ಹಗರಣ ಬೆಳಕಿಗೆ

mysuru

ಮೈಸೂರು, ಮೇ 3-ಮೈಸೂರು ಮಹಾನಗರ ಪಾಲಿಕೆ ಸದಸ್ಯರ ಮೊಬೈಲ್ ಹಗರಣ ಇನ್ನೂ ಹಚ್ಚ ಹಸಿರಿರುವಾಗಲೇ ಕೋಟ್ಯಂತರ ರೂ. ಕಾರಿನ ಬಾಡಿಗೆ ಹಗರಣ ಇದೀಗ ಬೆಳಕಿಗೆ ಬಂದಿದೆ.  ಕಾರುಗಳಿಗಾಗಿ ಸಾರ್ವಜನಿಕರ ಕೋಟಿಗಟ್ಟಲೆ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ.  ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್ ಸದಸ್ಯರಿಗೆ ನೀಡಲಾಗಿದ್ದ ಮೊಬೈಲ್‍ಗಳ ಬಿಲ್ ಲಕ್ಷಾಂತರ ರೂ. ಬಂದಿದ್ದ ಹಿನ್ನೆಲೆಯಲ್ಲಿ ಮೊಬೈಲ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಅದಕ್ಕಿಂತ ಹೆಚ್ಚು ಅಂದರೆ ಕೋಟ್ಯಂತರ ರೂ. ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.ಮೈಸೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರೂ ಸೇರಿದಂತೆ 9 ಮಂದಿಗೆ ನೀಡಲಾದ ಕಾರಿಗೆ ವರ್ಷಕ್ಕೆ 3 ಕೋಟಿಗೂ ಹೆಚ್ಚು ಬಾಡಿಗೆ ನೀಡಲಾಗಿದೆ. ಪ್ರತಿ ತಿಂಗಳು ಈ 9 ಕಾರುಗಳಿಗೆ 18 ರಿಂದ 20 ಲಕ್ಷ ರೂ. ಸಾರ್ವಜನಿಕರ ತೆರಿಗೆ ಹಣ ಕಟ್ಟಲಾಗುತ್ತದೆ. ಈ ಕಾರುಗಳ ಪೈಕಿ ಇಂಡಿಕಾ, ಓಮ್ನಿ, ಸಿಯಾಜ್ ಕಾರುಗಳನ್ನು ಬಳಸಿದ್ದಾರೆ.  ಕಾರು ಬಳಸುತ್ತಿರುವ ಪಾಲಿಕೆ ಸದಸ್ಯರು ಒಂದು ವಾರ್ಡ್‍ಗೆ ಮಾತ್ರ ಸೀಮಿತವಾಗಿರುವಾಗ ಅವರಿಗೆ ಕಾರು ಅಗತ್ಯವಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಪಾಲಿಕೆ ಸದಸ್ಯರು ಒಂದು ದಿನವೂ ವಾರ್ಡ್‍ಗೆ ಬಂದು ಸ್ಥಳೀಯರ ಸಮಸ್ಯೆ ಆಲಿಸಿಲ್ಲ. ಅಂತಹವರಿಗೆ ಕಾರಿನ ಅಗತ್ಯವೇನಿದೆ. ಅವರ ಕಚೇರಿ ಮತ್ತು ಮನೆ, ವಾರ್ಡ್‍ಗಳು 15-20 ಕಿ.ಮೀ. ದೂರದಲ್ಲಿಯೋ ಅಥವಾ ಪ್ರತಿ ದಿನ ಮಳೆ-ಬಿಸಿಲು-ಗಾಳಿಯೆನ್ನದೆ ವಾರ್ಡ್‍ಗಳಲ್ಲಿ ಸುತ್ತಾಡುತ್ತಾರೆಯೋ. ಪರಿಸ್ಥಿತಿ ಹೀಗಿರುವಾಗ ಇವರಿಗೆ ಕಾರಿನ ಅಗತ್ಯವಿದೆಯೇ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.  ಪಾಲಿಕೆಯಲ್ಲಿ ಕಾರ್ಪೊರೇಟರ್ ಗಳು ಹಣವನ್ನು ಹೇಗೆ ಪೋಲು ಮಾಡುತ್ತಿದ್ದಾರೆಂಬುದಕ್ಕೆ ಇದೊಂದು ಜ್ವಲಂತ ಸಾಕ್ಷಿಯಾಗಿದೆ.

ಪಟ್ಟಣ ಮತ್ತು ನಗರ ಯೋಜನೆಯ ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ್ ಪ್ರೀತಂ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಕಾರ್ಪೊರೇಟರ್ಗಳು ಕಾರು ನೀಡಬೇಕೆಂಬುದು ಕಾನೂನಿನಲ್ಲಿಲ್ಲ, ಮುನಿಸಿಪಲ್ ಆ್ಯಕ್ಟ್‍ನಲ್ಲಿಲ್ಲ. ಹೀಗಿದ್ದರೂ ಅವರಿಗೆ ಹೇಗೆ ಕಾರು ಒದಗಿಸಲಾಗಿದೆ ಎಂಬುದು ಗೊತ್ತಿಲ್ಲ.  ನನಗೂ ಸಹ ಫೆಬ್ರವರಿಯಲ್ಲಿ ಕಾರು ನೀಡಲಾಗಿತ್ತು. ಮೇನಲ್ಲಿ ಕಾರು ಹಿಂದಿರುಗಿಸಿದ್ದೇನೆ. ಮೂರು ತಿಂಗಳ ಅವಧಿಯಲ್ಲಿ ಅದರ ಬಾಡಿಗೆ ಎಷ್ಟಾಯಿತು ಎಂದು ತಿಳಿಸಿದರೆ ಅದನ್ನು ನಾನು ಭರಿಸುತ್ತೇನೆಂದು ಹೇಳಿದ್ದಾರೆ. ಆದರೆ, ಉಳಿದವರು ಏಕೆ ಕಾರು ಬಳಸುತ್ತಿದ್ದಾರೆ ಎಂಬುದನ್ನು ಅವರಿಗೇ ಕೇಳಬೇಕು.

ಕೋಟಿಗಟ್ಟಲೆ ಹಣವನ್ನು ಕಾರು ಬಾಡಿಗೆಗೆ ಕಟ್ಟುವ ಬದಲು ಪ್ರತೀ ವಾರ್ಡ್‍ಗೂ ಈ ಹಣ ಬಳಸಿದರೆ ಎಷ್ಟೋ ಸಾರ್ವಜನಿಕರ ಸಮಸ್ಯೆಗಳು ಬಗೆಹರಿಯುತ್ತಿದ್ದವು. ಈಗ ನೀಡಲಾಗಿರುವ ಬಾಡಿಗೆ ಹಣದಲ್ಲಿ ಹೊಸ ಕಾರುಗಳನ್ನೇ ಪಾಲಿಕೆ ವತಿಯಿಂದ ಖರೀದಿಸಬಹುದಾಗಿತ್ತು. ಇದು ಪಾಲಿಕೆಗೆ ಆಸ್ತಿಯೂ ಆಗುತ್ತಿತ್ತು. ಅದರ ಬದಲು ವಿನಾಕಾರಣ ವೆಚ್ಚ ಮಾಡುವುದು ಎಷ್ಟು ಸರಿ ಎಂದರು.  ಪಾಲಿಕೆ ಆಯುಕ್ತರು ಮೊಬೈಲ್ ಕರೆಯ ವೆಚ್ಚ ಹೆಚ್ಚಾಗಿದ್ದಕ್ಕೆ ಮೊಬೈಲ್ ಸೇವೆಯನ್ನೇ ಸ್ಥಗಿತಗೊಳಿಸಿದ್ದಾರೆ. ಇದೀಗ ಇವರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆಂಬುದನ್ನು ಕಾದು ನೋಡಬೇಕು. ಕಾರನ್ನು ಹಿಂಪಡೆದು ಅವರಿಂದಲೇ ಬಾಡಿಗೆ ಹಣ ವಸೂಲಿ ಮಾಡುತ್ತಾರಾ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin