ಮೋದಿ-ಅಮಿತ್ ಷಾ ಮುಂದಿನ ಟಾರ್ಗೆಟ್ ಕರ್ನಾಟಕ

Modi-and-Amith-Shah

ಬೆಂಗಳೂರು,ಮಾ.11-ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಿಜೆಪಿ ತನ್ನ ಮುಂದಿನ ಗುರಿಯನ್ನು ಕರ್ನಾಟಕದತ್ತ ನೆಟ್ಟಿದೆ. 2018ರ ಮಾರ್ಚ್-ಏಪ್ರಿಲ್‍ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಳೆದುಕೊಂಡಿರುವ ಅಧಿಕಾರವನ್ನು ಪುನಃ ಪಡೆಯುವಲ್ಲಿ ಕೇಂದ್ರ ಬಿಜೆಪಿ ನಾಯಕರು ರಣತಂತ್ರವನ್ನು ರೂಪಿಸಿದ್ದಾರೆ.   ಈ ವರ್ಷದ ಅಂತ್ಯಕ್ಕೆ ಗುಜರಾತ್‍ನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಜೋಡಿ ಕರ್ನಾಟಕದಲ್ಲೂ ಕಮಲವನ್ನು ಅರಳಿಸಲು ತಮ್ಮದೇ ಆದ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

ನೋಟು ಅಮಾನೀಕರಣದ ನಂತರವೂ ದೇಶದ ಜನತೆ ತಮ್ಮನ್ನು ಕೈ ಬಿಟ್ಟಿಲ್ಲ ಎಂಬುದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಿಂದ ಗೋಚರವಾಗಿದೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡಿರುವ ಕಮಲ ಪಡೆ ನಾಯಕರು ಕರ್ನಾಟಕವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ತಂತ್ರಗಳನ್ನು ರೂಪಿಸಿದೆ. ಉತ್ತರಪ್ರದೇಶ, ಉತ್ತರಾಖಂಡ್ ಸೇರಿದಂತೆ ಮತ್ತಿತರರ ರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಮುಂದಿನ ತಿಂಗಳಿನಿಂದ ಅಮಿತ್ ಷಾ ಕರ್ನಾಟಕದಲ್ಲಿ ಪ್ರವಾಸ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.  ಈವರೆಗೂ ಉತ್ತರ ಪ್ರದೇಶವನ್ನೇ ಗುರಿಯಾಗಿಟ್ಟುಕೊಂಡಿದ್ದ ಬಿಜೆಪಿ ನಾಯಕರು ಈಗ ದಕ್ಷಿಣ ಭಾರತವನ್ನು ಕರ್ನಾಟಕದ ಮೂಲಕ ಹೆಬ್ಬಾಗಿಲು ಮಾಡಲು ಕಾರ್ಯೋನ್ಮುಖವಾಗಿದ್ದಾರೆ.

ಭಿನ್ನಮತಕ್ಕೆ ಬ್ರೇಕ್:

ಇನ್ನು ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಮತ ಗೊಂದಲ, ಆರೋಪ ಪ್ರತ್ಯಾರೋಪಗಳಿಗೆ ಕೇಂದ್ರ ವರಿಷ್ಠರು ಅವಕಾಶ ನೀಡುವುದಿಲ್ಲ. ಇಡೀ ಬಿಜೆಪಿ ಅಮಿತ್ ಷಾ ಮತ್ತು ನರೇಂದ್ರ ಮೋದಿ ತೆಕ್ಕೆಗೆ ಬೀಳಲಿದ್ದು, ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಸಮರಕ್ಕೂ ಬ್ರೇಕ್ ಬೀಳಲಿದೆ.  ಟಿಕೆಟ್ ಹಂಚಿಕೆ, ಪ್ರಚಾರದ ಕಾರ್ಯಶೈಲಿ ಸೇರಿದಂತೆ ಪ್ರತಿಯೊಂದು ಕೂಡ  ಕೇಂದ್ರ ವರಿಷ್ಠರೇ ತೀರ್ಮಾನಿಸಲಿದ್ದು , ರಾಜ್ಯ ನಾಯಕರು ನಿರ್ದೇಶನಗಳನ್ನಷ್ಟೇ ಪಾಲಿಸಬೇಕಾಗುತ್ತದೆ. ಇನ್ನು ಬಿಎಸ್‍ವೈ ಮತ್ತು ಈಶ್ವರಪ್ಪ ನಡುವಿನ ಭಿನ್ನಮತಕ್ಕೆ ಎಳ್ಳಷ್ಟು ಅವಕಾಶ ನೀಡದಿರಲು ಕೇಂದ್ರ ನಾಯಕರು ತೀರ್ಮಾನಿಸಿದ್ದಾರೆ.

ಕೇಂದ್ರದ ನಾಯಕರೇ ಪ್ರತಿಯೊಂದು ವಿಷಯದಲ್ಲೂ ಮೂಗು ತೂರಿಸಲಿದ್ದು , ದೆಹಲಿಯಿಂದಲೇ ಎಲ್ಲವೂ ನಿರ್ಧರವಾಗಲಿದೆ. ಯಡಿಯೂರಪ್ಪ ತನ್ನ ಬೆಂಬಲಿಗರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿಯುವುದಾಗಲಿ, ಈಶ್ವರಪ್ಪ ರಾಯಣ್ಣ ಬ್ರಿಗೇಡ್‍ನಲ್ಲಿ ಮುಂದುವರೆಯುತ್ತೇನೆಂಬ ಹಠ ಹಿಡಿಯುವಂತಿಲ್ಲ. ಎಲ್ಲರೂ ಇನ್ನು ಮುಂದೆ ಒಗ್ಗಟ್ಟಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದು  ಅನಿವಾರ್ಯವಾಗುತ್ತದೆ. ಈಗಾಗಲೇ ಯಡಿಯೂರಪ್ಪನವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದರಿಂದ ಯಾರೊಬ್ಬರೂ ಅಪಸ್ವರ ತೆಗೆಯುವುದಾಗಲಿ, ಬಣ ಸೃಷ್ಟಿ ಮಾಡುವುದು, ಪರಸ್ಪರ ಕಾಲೆಳೆಯುವಿಕೆಗೂ ಅಂತ್ಯ ಹಾಡಲು ಕೇಂದ್ರ ನಾಯಕರು ಮುಂದಾಗಿದ್ದಾರೆ.   ಕರ್ನಾಟಕವನ್ನು ಶತಾಯಗತಾಯ ಗೆಲ್ಲಲೆಬೇಕೆಂಬ ಕಾರಣಕ್ಕಾಗಿ ಆರ್‍ಎಸ್‍ಎಸ್ ಮತ್ತು ಬಿಜೆಪಿ ಜಂಟಿ ಕಾರ್ಯತಂತ್ರ ಹೆಣೆದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin