ಮೋದಿ ಭೇಟಿಯಾಗಿ ರೈತರ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದ ರಾಹುಲ್
ನವದೆಹಲಿ, ಡಿ.16-ನೋಟು ರದ್ಧತಿಯಿಂದ ದೇಶಾದ್ಯಂತ ಜನರು ಅನುಭವಿಸುತ್ತಿರುವ ಕಷ್ಟ-ನಷ್ಟಗಳ ಪಟ್ಟಿಯೊಂದಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಇಂದು ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿದ ರಾಹುಲ್ಗಾಂಧಿ, ಸಾಲ ಮನ್ನಾ ಸೇರಿದಂತೆ ರೈತರ ಹಿತಾಸಕ್ತಿ ಕಾಪಾಡಬೇಕು, ಗೋಧಿ ಮೇಲಿನ ಆಮದು ಸುಂಕ ವಜಾಗೊಳಿಸಬೇಕು ಸೇರಿದಂತೆ ಇತ್ಯಾದಿ ಬೇಡಿಕೆಗಳುಳ್ಳ ಮನವಿ ಪತ್ರ ಸಲ್ಲಿಸಿದರು.
ಸುಮಾರು ಐದು ನಿಮಿಷಗಳ ಕಾಲ ಕಾಂಗ್ರೆಸ್ ನಿಯೋಗ ಮೋದಿಯವರನ್ನು ಭೇಟಿ ಮಾಡಿ ನೋಟು ರದ್ಧತಿಯಿಂದ ದೇಶದ ರೈತರು, ಶ್ರಮಿಕ ವರ್ಗದವರು ಮತ್ತು ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ವಿಸ್ತೃತ ಮನವಿ ಪತ್ರವನ್ನು ಸಲ್ಲಿಸಿತು. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಹೊರತುಪಡಿಸಿ ಬಹುತೇಕ ವಿರೋಧ ಪಕ್ಷಗಳು ಈ ನಿಯೋಗದಲ್ಲಿದ್ದವು. ಪ್ರಧಾನಿಯವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ಗಾಂಧಿ, ನೋಟು ರದ್ಧತಿಯಿಂದ ಉದ್ಭವಿಸಿರುವ ಭೀಕರ ಪರಿಸ್ಥಿತಿ ಬಗ್ಗೆ ಮನವಿ ಪತ್ರ ನೀಡಲಾಗಿದೆ ಎಂದರು.
ಇನ್ನೊಂದೆಡೆ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದ ನಂತರ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನೋಟು ರದ್ಧತಿಯಿಂದ ಉಂಟಾಗಿರುವ ಸಮಸ್ಯೆ ಮತ್ತು ಸಂಸತ್ ಕಲಾಪದಲ್ಲಿ ಮಾತನಾಡಲು ಪ್ರತಿಪಕ್ಷಗಳಿಗೆ ಅವಕಾಶ ನೀಡದಿರುವ ಬಗ್ಗೆ ಪ್ರಣಬ್ ಮುಖರ್ಜಿ ಅವರ ಗಮನಕ್ಕೆ ತರುವುದಾಗಿ ತಿಳಿಸಿದರು.