ಮ್ಯಾನ್‍ಹೋಲ್‍ಗೆ ಇಳಿದ ನಾಲ್ವರು ಪೌರ ಕಾರ್ಮಿಕರ ದುರಂತ ಸಾವು

Manhole
ಸಾಂಧರ್ಬಿಕ ಚಿತ್ರ

ಹೈದರಾಬಾದ್, ಆ.14– ಮ್ಯಾನ್‍ಹೋಲ್ ಸ್ವಚ್ಛತೆಗೆ ಇಳಿದಿದ್ದ ಮೂವರು ಪೌರ ಕಾರ್ಮಿಕರು ಸೇರಿದಂತೆ ನಾಲ್ವರು ಸಾವಿಗೀಡಾದ ಘಟನೆ ತೆಲಂಗಾಣದ ಹೈದರಾಬಾದ್‍ನ ಮಾದಾಪುರ ಪ್ರದೇಶದ ಅಯ್ಯಪ್ಪ ಸೊಸೈಟಿ ಸಮೀಪ ಈ ಘಟನೆ ನಡೆದಿದೆ.  ಪೌರಕಾರ್ಮಿಕರಿಗೆ ಮಾತ್ರ ಈ ಅಮಾನವೀಯ ಪದ್ಧತಿಯಿಂದ ಸ್ವಾತಂತ್ರ್ಯ ಇನ್ನೂ ಕನ್ನಡಿಯ ಗಂಟಾಗಿಯೇ ಉಳಿದಿದೆ. ಹೈದರಾಬಾದ್ ಮೆಟ್ರೊ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಗುತ್ತಿಗೆ ಕಾರ್ಮಿಕರು ಮ್ಯಾನ್‍ಹೋಲ್‍ನಲ್ಲಿ ವಿಷಾನಿಲದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಐಟಿ ಹಬ್ ಮಾದಾಪುರದ ಮೇಲ್ಭಾಗದ ಅಯ್ಯಪ್ಪ ಸೊಸೈಟಿ ಬಳಿ ಈ ದುರ್ಘಟನೆ ಸಂಭವಿಸಿದೆ.

ಇಬ್ಬರು ಪೌರಕಾರ್ಮಿಕರು 20 ಅಡಿ ಆಳದ ಮ್ಯಾನ್‍ಹೋಲ್ ಸ್ವಚ್ಛಗೊಳಿಸುತ್ತಿದ್ದಾಗ, ವಿಷಾನಿಲದಿಂದ ಪ್ರಜ್ಞಾಶೂನ್ಯರಾಗಿ ಬಿದ್ದರು. ಅವರನ್ನು ಉಳಿಸುವ ಸಲುವಾಗಿ ಮ್ಯಾನ್‍ಹೋಲ್‍ಗೆ ಇಳಿದ ಮತ್ತಿಬ್ಬರು ಕೂಡಾ ಸಿಕ್ಕಿಹಾಕಿಕೊಂಡರು ಎಂದು ಪೊಲೀಸರು ವಿವರಿಸಿದ್ದಾರೆ.  ಮ್ಯಾನ್‍ಹೋಲ್ ಒಳಗಿದ್ದ ವಿಷಕಾರಿ ಅನಿಲದಿಂದ ಈ ಸಾವು ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಮ್ಯಾನ್‍ಹೋಲ್ ಸ್ವಚ್ಛತೆಗೆ ಇಳಿದ ಮೂವರು ಪೌರಕಾರ್ಮಿಕರು ಹೊರಬಾರದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿ ಶ್ರೀನಿವಾಸ್ ಎಂಬುವವರು ಈ ಮೂವರ ರಕ್ಷಣೆಗಾಗಿ ಹೊಂಡಕ್ಕೆ ಇಳಿದಿದ್ದಾರೆ. ಆದರೆ, ಅವರು ಕೂಡ ಹೊರ ಬಾರಲಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ, ಮ್ಯಾನ್‍ಹೋಲ್‍ಗೆ ಬಿದ್ದವರನ್ನು ರಕ್ಷಿಸಲು ಕೆಳಗೆ ಇಳಿದಿದ್ದ ಓರ್ವ 108 ಆಂಬುಲೆನ್ಸ್ ಸಿಬ್ಬಂದಿ ಕೂಡ ವಿಷಾನಿಲ ಸೇವಿಸಿ ಅಸ್ವಸ್ಥಗೊಂಡಿದ್ದ ಎಂದು ಮಾದಪುರ ಪೊಲೀಸ್ ಇನ್ಸ್‍ಪೆಕ್ಟರ್ ಆರ್ ಕಾಳಿಂಗ ರಾವ್ ಹೇಳಿದ್ದಾರೆ. ಗುತ್ತಿಗೆದಾರರು ಕೌಶಲ್ಯ ಇಲ್ಲದ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದು, ಕನಿಷ್ಠ ಮುನ್ನೆಚ್ಚರಿಕೆ ಕೈಗೊಳ್ಳದ ಕಾರಣ ನಾಲ್ವರು ಬಲಿಯಾಗಿದ್ದಾರೆ ಎಂದು ಸಹ ಕಾರ್ಮಿಕರು ದೂರುತ್ತಾರೆ.  ಹಲವು ದಿನಗಳಿಂದ ಮ್ಯಾನ್ ಹೋಲ್ ಮುಚ್ಚಿದ್ದು, ಇದರಿಂದ ಉಂಟಾಗಿದ್ದ ವಿಷಾನಿಲ ಸೇವಿಸಿ ನಾಲ್ವರು ಸಾವನ್ನಪ್ಪಿರಬಹುದೆಂದು ಹೇಳಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಗುತ್ತಿಗೆದಾರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

► Follow us on –  Facebook / Twitter  / Google+

Sri Raghav

Admin