ಯಡಿಯೂರಪ್ಪ ಭಂಡರಲ್ಲಿ ಮಹಾ ಭಂಡ : ಸಿದ್ದರಾಮಯ್ಯ

Yadiyurappa-vs-Siddaramaiah

ಮೈಸೂರು, ಫೆ.12-ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಂಡರಲ್ಲಿ ಮಹಾ ಭಂಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.  ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ಮೇಲೆ 15ಕ್ಕೂ ಹೆಚ್ಚು ಮೊಕದ್ದಮೆಗಳಿವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇಲ್ಲದೆ ಹೋಗಿದ್ದರೆ ಅವರು ಇಷ್ಟೊತ್ತಿಗೆ ಜೈಲು ಸೇರಬೇಕಿತ್ತು ಎಂದು ಹೇಳಿದರು. ಭೂತದ ಬಾಯಲ್ಲಿ ಬಂದ ಹಾಗೆ ಯಡಿಯೂರಪ್ಪ ಭೂತದಂತೆ ಮಾತನಾಡುತ್ತಾರೆ. ಜೈಲಿಗೆ ಹೋಗಿ ಬಂದವರಿಂದ ಬುದ್ಧಿ ಹೇಳಿಸಿಕೊಳ್ಳುವ ಅಗತ್ಯ ಇಲ್ಲ ಎಂದರು.  ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಯಡಿಯೂರಪ್ಪನವರು ತಮ್ಮ ಮೇಲಿರುವ ಮೊಕದ್ದಮೆಗಳನ್ನು ವಜಾ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್‍ಗೆ ಒಂದು ಸಾವಿರ ಕೋಟಿ ನೀಡಿಲ್ಲ ಎಂದು ಸಿದ್ದರಾಮಯ್ಯ ಆಣೆ, ಪ್ರಮಾಣ ಮಾಡಲಿ ಎಂದು ಯಡಿಯೂರಪ್ಪ ಹೇಳಿದ್ದರಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು, ನ್ಯಾಯಾಲಯ ಆಣೆ, ಪ್ರಮಾಣ ನಂಬುವುದಿಲ್ಲ. ಆಣೆ ಪ್ರಮಾಣ ಮಾಡುವ ಹಾಗಿದಿದ್ದರೆ ಕಳ್ಳರು, ಮೋಸಗಾರರು, ವಂಚನೆಗಾರರು ಆಣೆ, ಪ್ರಮಾಣ ಮಾಡಿ ಹೊರಬರುತ್ತಿದ್ದರು. ನ್ಯಾಯಾಲಯ ಪರಿಗಣಿಸುವುದು ಕೇವಲ ಸಾಕ್ಷಿ ಪ್ರಮಾಣ ಪತ್ರಗಳನ್ನು ಮಾತ್ರ. ಯಡಿಯೂರಪ್ಪನವರು ನನ್ನ ಮೇಲೆ ಮಾಡಿರುವ ಆರೋಪಕ್ಕೆ ಸಾಕ್ಷಿ ಇದ್ದರೆ ಅದನ್ನು ಸಾಬೀತು ಮಾಡಲಿ ಎಂದು ತಿರುಗೇಟು ನೀಡಿದರು.

ಎರಡು ದಿನದಲ್ಲಿ ಮೂರು ಮಂದಿ ಸಚಿವರು ರಾಜೀನಾಮೆ ನೀಡಲಿದ್ದಾರೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದಿದ್ದರು. ಇಷ್ಟು ದಿನ ಆದರೂ ನಮ್ಮಲ್ಲಿ ಯಾರೊಬ್ಬರೂ ರಾಜೀನಾಮೆ ಕೊಟ್ಟಿಲ್ಲ. ಅಂತಹ ಪರಿಸ್ಥಿತಿ ಉದ್ಭವವೂ ಆಗಿಲ್ಲ. ಯಡಿಯೂರಪ್ಪ ಹೇಳೊದೆಲ್ಲ ಬರೀ ಸುಳ್ಳು ಎಂದು ಸಿದ್ದರಾಮಯ್ಯ ಟೀಕಿಸಿದರು.  ಕೇಂದ್ರ ಸರ್ಕಾರ ಒಂದು ರೀತಿ ಬ್ಲಾಕ್‍ಮೇಲ್ ತಂತ್ರ ಮಾಡುತ್ತಿದೆ ನಗದು ಅಪಮೌಲೀಕರಣ ಮಾಡಿದ್ದರಿಂದ ಯಾವ ಪರಿಣಾಮವೂ ಬೀರಿಲ್ಲ. ಅವರು ಹೇಳಿದಂತೆ ಕಪ್ಪು ಹಣವೂ ಹೊರಬಂದಿಲ್ಲ. ಭ್ರಷ್ಟಾಚಾರವೂ ಕಡಿಮೆ ಆಗಿಲ್ಲ. ತನ್ನ ತಪಊ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಪ್ರಭಾವ ಇರುವ ಕಡೆ ದಾಳಿ ಮಾಡಿಸುವ ಮೂಲಕ ಬ್ಲಾಕ್‍ಮೇಲ್ ತಂತ್ರ ಅನುಸರಿಸುತ್ತಿದೆ ಎಂದು ದೂರಿದರು.

ನಗದು ಅಪಮೌಲೀಕರಣ ಮಾಡಿದ ನಂತರ ಅದೆಷ್ಟೋ ಮಂದಿ ಚಿನ್ನ ಖರೀದಿಸಿದ್ದಾರೆ, ಭೂಮಿ ಕೊಂಡಿದ್ದಾರೆ. ಬೇಕಾದಷ್ಟು ಮಂದಿ ಕೋಟ್ಯಂತರ ರೂ. ಬಂಡವಾಳ ಹೂಡಿದ್ದಾರೆ. ಇಂತಹವರ ಮೆಲೆ ದಾಳಿ ಮಾಡಲಾಗಿಲ್ಲ. ಕೇವಲ ಕಾಂಗ್ರೆಸ್‍ನವರ ಮನೆ ಮೇಲೆ ದಾಳಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಬರಪರಿಹಾರಕ್ಕೆ ನಾವು ಕೇಳಿದಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡದೆ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin