ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ : ಅಶೋಕ್ ಭವಿಷ್ಯ

Ashok--02

ಬೆಂಗಳೂರು, ಡಿ.16- ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಇಂದಿಲ್ಲಿ ಭವಿಷ್ಯ ನುಡಿದರು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ಕೆರೆ ಸಮೀಪ ಇತ್ತೀಚೆಗೆ ಕುಸಿದು ಬಿದ್ದಿದ್ದ 24 ಅಡಿ ಉದ್ದದ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಗೆ ರಾಜ್ಯಾದ್ಯಂತ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದೆ. ಕಳೆದ ವಾರ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ್ದ ಪರಿವರ್ತನಾ ಯಾತ್ರೆಗೆ ಜಮಾಯಿಸಿದ್ದ ಜನಸಮೂಹವೇ ಇದಕ್ಕೆ ಸಾಕ್ಷಿ ಎಂದರು. ನಾಳೆ ಹಳೆ ಏರ್‍ಪೋರ್ಟ್ ರಸ್ತೆಯಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ಮೈದಾನದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಗೆ ಲಕ್ಷಾಂತರ ಕಾರ್ಯಕರ್ತರು ಸಾಕ್ಷಿಯಾಗಲಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿದ್ದು, ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸಿ ಬಿಜೆಪಿಯನ್ನು ಆಶೀರ್ವದಿಸಲು ರಾಜ್ಯದ ಮತದಾರರು ತೀರ್ಮಾನಿಸಿದ್ದಾರೆ ಎಂದು ಹೇಳಿದರು. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದ್ದು, ಅದೇ ಫಲಿತಾಂಶ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಪುನರಾವರ್ತನೆಯಾಗಲಿದ್ದು, ಪಕ್ಷದ ನೇತೃತ್ವ ವಹಿಸಿರುವ ಯಡಿಯೂರಪ್ಪನವರು ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದರು.

ಕೆಲ ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಯಡಿಯೂರು ಕೆರೆ ಮುಂಭಾಗ 1971ರಲ್ಲಿ ನಿರ್ಮಿಸಿದ್ದ 500 ಮೀಟರ್ ಉದ್ದದ ತಡೆಗೋಡೆ ಉರುಳಿಬಿದ್ದು, 4 ಕಾರುಗಳು ಜಖಂಗೊಂಡಿದ್ದವು. ಹೀಗಾಗಿ ತಡೆಗೋಡೆ ಪುನರ್ ನಿರ್ಮಾಣ ಕಾಮಗಾರಿಯನ್ನು ಮೂರೂವರೆ ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅಶೋಕ್ ಭರವಸೆ ನೀಡಿದರು.
ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಹಾಗೂ ಬಿಜೆಪಿ ವಕ್ತಾರ ಎನ್.ಆರ್.ರಮೇಶ್, ಬಿಬಿಎಂಪಿ ಸದಸ್ಯೆ ಪೂರ್ಣಿಮಾ ರಮೇಶ್ ಹಾಗೂ ಹಿರಿಯ ನಾಗರಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Sri Raghav

Admin