ಯಶವಂತಪುರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನೇರ ರೈಲು ಸೇವೆ

Spread the love

Press-Club--01

ಬೆಂಗಳೂರು, ಆ.1- ಯಶವಂತಪುರದಿಂದ ಏರ್‍ ಪೋರ್ಟ್‍ಗೆ ನೇರ  ರೈಲು ಸಂಪರ್ಕ ಕಲ್ಪಿಸಲು ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ತಿಳಿಸಿದರು. ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್‍ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಬ್‍ಅರ್ಬನ್ ರೈಲು ಯೋಜನೆ ರಾಮನಗರದಿಂದ ಕೆಂಗೇರಿ, ತುಮಕೂರಿನಿಂದ ಯಶವಂತಪುರ ಹಾಗೂ ಯಶವಂತಪುರದಿಂದ ನೇರವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಆರಂಭಿಸಲು ಡಿಪಿಆರ್ ಸಿದ್ಧಗೊಂಡಿದೆ ಎಂದು ಹೇಳಿದರು. ಮೆಟ್ರೋ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, 2ನೆ ಹಂತದ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ.

ಇದರ ಜತೆಗೆ ಮೆಟ್ರೋ 2ಎ ಯೋಜನೆ ಡೈರಿ ವೃತ್ತದಿಂದ ಕೆ.ಆರ್.ಪುರದವರೆಗೆ ವಿಸ್ತರಿಸಲು ಸಾರ್ವಜನಿಕ ಸಹಭಾಗಿತ್ವದಲ್ಲಿ ಯೋಜನೆ ಕೈಗೆತ್ತಿಕೊಳ್ಳುತ್ತೇವೆ. ನಾಗವಾರದಿಂದ ಏರ್‍ಪೋರ್ಟ್‍ವರೆಗೆ ಮೆಟ್ರೋ ವಿಸ್ತರಣೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ.  ಯಶವಂತಪುರದಿಂದ ಯಲಹಂಕದವರೆಗೂ ಹಳಿ ಜೋಡಣೆ ಅಸಾಧ್ಯ. ಹಾಗಾಗಿ ಅಲ್ಲಿಯವರೆಗೆ ಎತ್ತರಿಸಿದ ಎಲಿವೇಟೆಡ್ ಹಳಿ ಜೋಡಣೆ ಮಾಡಿ ಅಲ್ಲಿಗೆ ಸಂಪರ್ಕ ಕಲ್ಪಿಸಲು 1600 ಕೋಟಿ ಹಣ ಮೀಸಲಿರಿಸಲಾಗಿದ್ದು, ಸಾಧಕ-ಬಾಧಕಗಳ ನಂತರ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದರು.

ಇನ್ನೂರು ಕಿಲೋ ಮೀಟರ್ ಇದ್ದ ಬೆಂಗಳೂರು ನಗರ 800 ಕಿ.ಮೀ ವಿಸ್ತಾರಗೊಂಡಿದೆ. ಹೀಗಾಗಿ ಸಮಸ್ಯೆಗಳು ಜಾಸ್ತಿಯಾಗಿವೆ. ಈ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು  ಬೆಂಗಳೂರು ಇತಿಹಾಸದಲ್ಲೇ ನಗರದ ಸಮಗ್ರ ಅಭಿವೃದ್ಧಿಗೆ 7300 ಕೋಟಿಯಷ್ಟು ಬೃಹತ್ ಅನುದಾನ ನೀಡಿರುವುದು ಸಿದ್ದರಾಮಯ್ಯ ಸರ್ಕಾರ. ಅನುದಾನ ನೀಡಿದ್ದರೂ ಎಲ್ಲ ಕೆಲಸಗಳನ್ನು ಈಗಲೇ ಮುಗಿಸುತ್ತೇವೆ ಎಂದು ಹೇಳಲಾಗಲ್ಲ. ಆದರೆ ಎಲ್ಲ ಸಮಸ್ಯೆ ನಿವಾರಿಸುವತ್ತ ನಾವು ದಿಟ್ಟ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದರು.
7300 ಕೋಟಿಯಲ್ಲಿ ಈಗಾಗಲೇ 3000 ಕೋಟಿಯಷ್ಟು ಕೆಲಸ ಮಾಡಿ ಮುಗಿಸಿದ್ದೇವೆ. 110 ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸಲು 1800 ಕೋಟಿ ರೂ. ಕೊಟ್ಟಿದ್ದು, ಈಗಾಗಲೇ ಟೆಂಡರ್ ನೀಡಿ ಕೆಲಸ ಪ್ರಗತಿಯಲ್ಲಿದೆ. 142 ಕಿ.ಮೀ ಬೃಹತ್ ನೀರು ಕಾಲುವೆ ಕೆಲಸ ಮುಗಿಸಿದ್ದೇವೆ. 198 ಕಿ.ಮೀ.ನಲ್ಲಿ ಕೆಲಸ ನಡೀತಿದೆ. ಆ ಕೆಲಸ ಮುಗಿದರೂ ಇನ್ನೂ 400 ಕಿ.ಮೀ ಕೆಲಸ ಉಳಿಯುತ್ತೆ. ಅದನ್ನು ಹಂತ ಹಂತವಾಗಿ ಮಾಡುತ್ತೇವೆ ಎಂದರು. ರಾಜಕಾಲುವೆ ಒತ್ತುವರಿ ಯಾರೇ ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು, ಸಂತ್ರಸ್ತರಿಗೆ ಪರಿಹಾರ ನೀಡಲಾಗುತ್ತದೆ ಎಂದರು.

2020ರ ವೇಳೆಗೆ ಎಸ್‍ಟಿಪಿ ಅಳವಡಿಕೆ:

ನಗರದಲ್ಲಿ ಹಲವಾರು ಕೆರೆಗಳಿವೆ. ಆದರೂ ತ್ಯಾಜ್ಯ ನೀರು ಸಂಸ್ಕರಣೆ ಮಾಡಲು ಆದ್ಯತೆ ನೀಡಿದೆ. ಶೇ.80ಕೆರೆಗಳಿಗೆ ಎಸ್‍ಟಿಪಿ ಅಳವಡಿಸುತ್ತಿದ್ದು, ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳಲಿದ್ದು, ಉಳಿದದ್ದು 2020ರ ವೇಳೆಗೆ ಎಲ್ಲ ಕೆರೆಗಳಿಗೆ ಎಸ್‍ಟಿಪಿ ಅಳವಡಿಕೆ ಪೂರ್ಣಗೊಳ್ಳಲಿದೆ. ಹಲವು ಕೆರೆಗಳನ್ನು ಬಿಡಿಎ, ಬಿಬಿಎಂಪಿ, ಕೆರೆ ಅಭಿವೃದ್ಧಿ ಪ್ರಾಧಿಕಾರಗಳು ಅಭಿವೃದ್ಧಿಪಡಿಸಿವೆ. ಬೆಳ್ಳಂದೂರು, ವರ್ತೂರು ಕೆರೆಗಳನ್ನು ಮಾಲಿನ್ಯ ಮುಕ್ತಗೊಳಿಸಲು ಕ್ರಮಕೈಗೊಂಡಿದ್ದೇವೆ ಎಂದರು.

ಕಸದ ನಿರ್ವಹಣೆಗೆ ಆದ್ಯತೆ:

ನಗರದಲ್ಲಿ ಪ್ರತಿನಿತ್ಯ 4 ಸಾವಿರ ಟನ್ ಕಸ ಉತ್ಪತ್ತಿಯಾಗುತ್ತಿದೆ. ಕಸ ವಿಲೇವಾರಿ ಪ್ರಮುಖ ಸಮಸ್ಯೆಯಾಗಿದೆ. ಇದರಲ್ಲಿ ಶೇ.100ರಷ್ಟು ಸಾಧನೆ ಮಾಡಿಲ್ಲ. ಈ ಸಮಸ್ಯೆ ನಿವಾರಣೆಗೆ ಹೆಣ್ಣೂರು ಬಂಡೆ ಕ್ವಾರಿಯಲ್ಲಿ ಕಸ ಹಾಕಿ ಅದನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಕ್ರಮಕೈಗೊಂಡಿದ್ದೇವೆ ಎಂದರು.
ಅದೇ ರೀತಿ ನಗರದ ಸುತ್ತಮುತ್ತಲ ಒಂದು ಸಾವಿರ ಎಕರೆ ಕ್ವಾರಿ ಪ್ರದೇಶವನ್ನು ಬಳಕೆ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ. ಕಸದಿಂದ ಇಂಧನ ಉತ್ಪತ್ತಿ ಮಾಡಲು ಜರ್ಮನಿ ಸಂಸ್ಥೆಯೊಂದು ಮುಂದೆ ಬಂದಿದೆ. ಒಟ್ಟಾರೆ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಹೇಳಿದರು.

ಅಭಿವೃದ್ಧಿ ವಿರೋಧಿಗಳು:

ಸ್ಟೀಲ್ ಬ್ರಿಡ್ಜ್ ಮಾಡಲು ಹೋದರೆ 65ಕೋಟಿ ಅವ್ಯವಹಾರ ಅಂತಾರೆ. ಇಂದಿರಾ ಕ್ಯಾಂಟೀನ್ ಮಾಡಲು ಹೊರಟರೆ ಅವ್ಯವಹಾರ ಅಂತಾರೆ. ಹೀಗೆ ಆರೋಪ ಮಾಡೋರಿಗೆ ಹಸಿವೆಯೇ ಆಗಲ್ಲ ಅನ್ಸುತ್ತೆ. 65 ಕೋಟಿ ಆರೋಪ ಮಾಡಿದರೆ ರಾಜಕೀಯ ಲಾಭ ಎಂದು ಯಾರೋ ಜ್ಯೋತಿಷಿ ಹೇಳಿರಬಹುದು. ಹೀಗಾಗಿ ಆಧಾರರಹಿತ ಆರೋಪ ಮಾಡ್ತಿದ್ದಾರೆ. ಆರೋಪ ಮಾಡುವವರು ಬೆಂಗಳೂರಿನ ಅಭಿವೃದ್ಧಿಗೆ ವಿರೋಧವಾಗಿದ್ದಾರೆ. ಇದೇ ಅವರ ಕಾಯಕ ಎಂದು ಜಾರ್ಜ್ ಲೇವಡಿ ಮಾಡಿದರು.

ತೊಂದರೆ ತಾತ್ಕಾಲಿಕ:

ಬೆಂಗಳೂರು ಪ್ಲ್ಯಾನ್‍ಡ್ ಸಿಟಿಯಲ್ಲ. ಹಾಗಾಗಿ ನಗರ ಬೆಳೆದಂತೆ ನಾವು ಹೊಸ ಹೊಸ ಪ್ಲ್ಯಾನ್ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಶಾಶ್ವತವಾಗಿ ಬಾಳಿಕೆ ಬರುವ ಟೆಂಡರ್‍ಶೂರ್ ವೈಟ್ ಟಾಪಿಂಗ್ ರಸ್ತೆ ಮಾಡುತ್ತಿದ್ದೇವೆ. ಈ ಕಾಮಗಾರಿ ನಡೆಯುತ್ತಿರುವೆಡೆ ಜನರಿಗೆ ಆಗುತ್ತಿರುವ ಸಮಸ್ಯೆ ತಾತ್ಕಾಲಿಕ. ಯೋಜನೆ ಪೂರ್ಣಗೊಂಡರೆ ಅದರ ಫಲ ಶಾಶ್ವತವಾಗಿರುತ್ತದೆ ಎಂದು ಹೇಳಿದರು.

ಕ್ರಿಮಿನಲ್ ಕೇಸ್:

ನಗರದ ವಿವಿಧೆಡೆ ಅಕ್ರಮ ಜಾಹೀರಾತು ಫಲಕ, ಭಿತ್ತಿಪತ್ರ ಅಳವಡಿಕೆ ಜಾಸ್ತಿಯಾಗಿದೆ. ಇದರಲ್ಲಿ ರಾಜಕೀಯ ವ್ಯಕ್ತಿಗಳು ಹೊರತಾಗಿಲ್ಲ. ನಗರವನ್ನು ಫ್ಲೆಕ್ಸ್‍ಮುಕ್ತ ಮತ್ತು ಜಾಹೀರಾತು ಮುಕ್ತ ಮಾಡಲು ಅಧಿಕಾರಿಗಳಿಗೆ ಸ್ವಾತಂತ್ರ್ಯ ಕೊಟ್ಟಿದ್ದೇನೆ. ಇನ್ನು ಮುಂದೆ ಯಾರು ಭಿತ್ತಿಪತ್ರ ಅಂಟಿಸುತ್ತಾರೋ ಹಾಗೂ ಮುದ್ರಿಸುವವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವಂತೆ ಸೂಚಿಸಿದ್ದೇನೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಲ್ಲ. ನಾನು ಕೂಡ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಜಾಹೀರಾತು ಫಲಕಗಳಲ್ಲಿ ನನ್ನ ಭಾವಚಿತ್ರ ಹಾಕಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಅಧಿಕಾರಕ್ಕೆ ಆಸೆ ಪಟ್ಟವನಲ್ಲ:

ನಾನು ರಾಜಕೀಯಕ್ಕೆ ಪ್ರವೇಶಿಸಿದ್ದು ಅನಿರೀಕ್ಷಿತ. ಯಾವತ್ತೂ ಅಧಿಕಾರಕ್ಕೆ ಆಸೆ ಪಟ್ಟವನಲ್ಲ. ವೀರೇಂದ್ರಪಾಟೀಲ್ ಮುಖ್ಯಮಂತ್ರಿಯಾಗಿದ್ದಾಗ ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದರು. ಈವರೆಗೆ ಅನೇಕ ಖಾತೆ ನಿರ್ವಹಿಸಿದ್ದೇನೆ. ನನ್ನ ಕೆಲಸ ನೋಡಿ ಸಿದ್ದರಾಮಯ್ಯನವರು ಬೆಂಗಳೂರು ಅಭಿವೃದ್ಧಿ ಜವಾಬ್ದಾರಿ ಕೊಟ್ಟಿದ್ದಾರೆ. ಅದನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಯಾರೇ ಏನೇ ಟೀಕೆ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.  ಸಂವಾದದಲ್ಲಿ ಬೆಂಗಳೂರು ವರದಿಗಾರರ ಕೂಟ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಪ್ರೆಸ್‍ಕ್ಲಬ್ ಅಧ್ಯಕ್ಷ ಸದಾಶಿವಶೆಣೈ, ಪ್ರಧಾನ ಕಾರ್ಯದರ್ಶಿ ಕಿರಣ್, ಖಜಾಂಚಿ ಬಿ.ಎನ್.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin