ಯಶಸ್ವಿಯಾದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ
ಚನ್ನಪಟ್ಟಣ, ಫೆ.10- ಭಾರತ ಸೇವಾದಳವನ್ನು ಎಲ್ಲಾ ಶಾಲೆಗಳಲ್ಲಿ ಪ್ರಾರಂಭಿಸಿ ಮಕ್ಕಳಲ್ಲಿ ಶಿಸ್ತು, ಶ್ರದ್ಧೆ, ಭಾವೈಕ್ಯತೆ, ದೇಶ ಪ್ರೇಮ, ದೇಶ ಭಕ್ತಿಯನ್ನು ಬೆಳೆಸಿ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹರೂರು ರಾಜಣ್ಣ ಕರೆ ನೀಡಿದರು.ನಗರಸಭೆ ಆವರಣದಲ್ಲಿ ಭಾರತ ಸೇವಾದಳ, ಚನ್ನಪಟ್ಟಣ ತಾಲ್ಲೂಕು ಘಟಕ ಆಯೋಜಿಸಿದ್ದ ತಾಲ್ಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ನೆನಪಿನ ಕಾಣಿಕೆ ವಿತರಿಸಿ ಮಾತನಾಡಿದರು.
ಮುಗ್ಧ್ದ ಮಕ್ಕಳಲ್ಲಿ ದೇಶ ಭಕ್ತಿ, ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ನಡೆಸಿಕೊಂಡುಬರುತ್ತಿರುವುದು ಶ್ಲಾಘನೀಯ ಎಂದರು.
ಸೇವಾದಳದ ಜಿಲ್ಲಾ ಅಧ್ಯಕ್ಷ ಸು.ತ.ರಾಮೇಗೌಡ ಮಾತನಾಡಿ, ಭಾರತ ಸೇವಾದಳದ ಹುಟ್ಟು, ಬೆಳವಣಿಗೆ, ಉದ್ದೇಶ, ಸೇವಾ ಮನೋಭಾವನೆ, ಕಾರ್ಯಚಟುವಟಿಕೆಗಳನ್ನು ವಿವರಿಸಿ, ಹರ್ಡೇಕರ್, ಗಾಂಧೀಜಿಯಂತಹ ಮಹಾನ್ ಚೇತನಗಳು ಸ್ವಾತಂತ್ರ್ಯ ಪೂರ್ವದಿಂದಲೂ ಭಾರತ ಸೇವಾದಳವನ್ನು ಕಟ್ಟಿ ಬೆಳೆಸಿದವರು. ಶಿಕ್ಷಣ ಇಲಾಖೆ ಮತ್ತು ಶಾಲಾ ಶಿಕ್ಷಕರು ಸಕ್ರಿಯವಾಗಿ ತೊಡಗಿಸಿಕೊಂಡು ಹಿರಿಯ ಚೇತನಗಳ ಆಶಯದಂತೆ ಎಲ್ಲಾ ಶಾಲೆಗಳಲ್ಲಿ ಭಾರತ ಸೇವಾದಳವನ್ನು ಪೂರ್ಣ ಪ್ರಮಾಣದಲ್ಲಿ ಕಟ್ಟಬೇಕೆಂದು ಹೇಳಿದರು.ಡಿವೈ.ಎಸ್.ಪಿ. ಆರ್.ಸಿ.ಲೋಕೇಶ್ಕುಮಾರ್, ಭಾರತ ಸೇವಾ ದಳದ ತಾಲ್ಲೂಕು ಅಧ್ಯಕ್ಷ ಹೆಚ್. ಗೋವಿಂದಯ್ಯ, ನಗರಸಭಾ ಅಧ್ಯಕ್ಷೆ ನಜ್ಮುನ್ನಿಸಾ, ಮಾಜಿ ಉಪಾಧ್ಯಕ್ಷ ಬಿ.ಪಿ.ಮುದ್ದುಕೃಷೇಗೌಡ, ಕ.ಸಾ.ಪ. ಜಿಲ್ಲಾ ಅಧ್ಯಕ್ಷ ಸಿಂ.ಲಿಂ.ನಾಗರಾಜು, ನಗರಸಭಾ ಪೌರಾಯುಕ್ತ ಡಾ.ಆನಂದ ಚಿ.ಕಲ್ಲೋಳಿಕರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೆಂಪರಾಜು, ಸ.ನೌ.ಸಂಘದ ಅಧ್ಯಕ್ಷ ಸಿದ್ದೇಗೌಡ, ಬೆಸ್ಕಾಂ ಎಸ್. ಶಿವಲಿಂಗಯ್ಯ, ವಿವೇಕ ಜಾಗೃತ ಬಳದ ಜಿಲ್ಲಾ ಅಧ್ಯಕ್ಷ ಕೆ.ತಿಪ್ಪೇಗೌಡ ಮತ್ತಿತರರಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS