ಯಾದವೀ ಕಲಹದ ಮಧ್ಯೆಯೇ ಏಕತೆ ಪ್ರದರ್ಶನ : ಅಖಿಲೇಶ್ ರಥಯಾತ್ರೆಗೆ ಮುಲಾಯಂ ಚಾಲನೆ

mulayam-akhilesh-cm

ಲಖನೌ, ನ.3- ಉತ್ತರಪ್ರದೇಶದ ಆಡಳಿತರೂಢ ಸಮಾಜವಾದಿ ಪಕ್ಷದಲ್ಲಿ ಭುಗಿಲೆದ್ದ ಯಾದವೀ ಕಲಹದ ಮಧ್ಯೆ ಏಕತೆ ಪ್ರದರ್ಶಿಸುವ ಪ್ರಮುಖ ವಿದ್ಯಮಾನವೊಂದು ನಡೆದಿದೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇಂದು ಕೈಗೊಂಡ ರಥಯಾತ್ರೆಗೆ ಪಕ್ಷದ ಪರಮೋಚ್ಚ ನಾಯಕ ಮುಲಾಯಂ ಸಿಂಗ್ ಯಾದವ್ ನಿಶಾನೆ ತೋರಿದರೆ, ವಿವಾದದ ಕೇಂದ್ರ ಬಿಂದು ಪಕ್ಷದ ರಾಜ್ಯಾಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ಕೂಡ ಉಪಸ್ಥಿತರಿದ್ದು, ಗಮನಸೆಳೆದರು. ಅಪ್ಪ-ಚಿಕ್ಕಪ್ಪನ ಸಮ್ಮುಖದಲ್ಲಿ ಅಖಿಲೇಶ್ ಈ ಯಾತ್ರೆಗೆ ವಿಧ್ಯುಕ್ತ ಚಾಲನೆ ದೊರೆತಿದ್ದು, ಏಕತೆ ಸಂದೇಶ ಹೊರಹೊಮ್ಮಿದೆ.

ಅಖಿಲೇಶ್ ಕೈಗೊಂಡಿರುವ ರಥಯಾತ್ರೆಗೆ ಮುಲಾಯಂ ಸಿಂಗ್ ಯಾದವ್ ಕೈಜೋಡಿಸು ತ್ತಾರೆಯೋ ಅಥವಾ ಇಲ್ಲವೋ ಎಂಬ ಕುತೂಹಲಕ್ಕೆ ಇದರಿಂದ ತೆರೆಬಿದ್ದಂತಾಗಿದೆ. ಕೆಲವೇ ತಿಂಗಳುಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಹೊಸ ಬೆಳವಣಿಗೆ ಪಕ್ಷದ ಕಾರ್ಯಕರ್ತರಲ್ಲಿ ನವೋಲ್ಲಾಸಕ್ಕೆ ಕಾರಣವಾಗಿದೆ. ಲಾ ಮಾರ್ಟಿನೆರ್ ಗ್ರೌಂಡ್ಸ್‍ನಲ್ಲಿ ಇಂದು ರಥಯಾತ್ರೆ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಖಿಲೇಶ್ ಅಗಮಿಸಿದ ಸ್ವಲ್ಪ ಸಮಯದಲ್ಲೇ ಶಿವಪಾಲ್ ಯಾದವ್ ಅಲ್ಲಿಗೆ ಬಂದರು.

ಬಳಿಕ ಮುಲಾಯಂ ಸಿಂಗ್ ಅಗಮನವಾಯಿತು. ಅಖಿಲೇಶ್ ಮತ್ತು ಶಿವಪಾಲ್ ಮಧ್ಯೆ ಮುಲಾಯಂ ಆಸೀನರಾದರು. ಸಮಾರಂಭ ಉದ್ದೇಶಿ ಮಾತನಾಡಿದ ಶಿವಪಾಲ್ ಅಖಿಲೇಸ್ ಕೋ ಹಮ್ ಶುಭಕಾಮನ ದೇತೆ ಹೇ (ನಾನು ಅಖಿಲೇಶ್ ಅವರಿಗೆ ಶುಭಕೋರುತ್ತೇನೆ). ಈ ರಥಯಾತ್ರೆ ಸಮಾಜಪಕ್ಷದ ವಿಜಯಯಾತ್ರೆ ಆಗಲಿದೆ ಎಂದು ಭವಿಷ್ಯ ನುಡಿದರು. 2017ರಂದು ನಡೆಸುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವುದೇ ನಮ್ಮ ಉದ್ದೇಶ ಎಂದು ಶಿವಪಾಲ್ ಹೇಳಿದರು. ರಥಯಾತ್ರೆಗೆ ನಿಶಾನೆ ತೋರಿ ಚಾಲನೆ ನೀಡಿದ ಮುಲಾಯಂ ಸಿಂಗ್ ಯಾದವ್ ಮಾತನಾಡಿ, ನಮಗೆ ಭಾರತ-ಪಾಕಿಸ್ತಾನದ ನಡುವೆ ಯುದ್ಧ ಬೇಡ. ನಮ್ಮ ಯೋಧರು ಪ್ರಾಣತ್ಯಾಗ ಮಾಡುವುದು ಬೇಡ.

ಈಗಾಗಲೇ ಹುತಾತ್ಮರಾಗಿರುವ ಯೋಧರ ಕುಟುಂಬಗಳ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಲಹೆ ಮಾಡಿದರು. ಅಖಿಲೇಶ್ ಯಾದವ್ ಮಾತನಾಡಿ ಮುಂದಿನ ಚುನಾವಣೆ ಯಲ್ಲಿ ಸಮಾಜವಾದಿ ಪಕ್ಷದ ಜಯ ಸಾಧಿಸಿ ಮತ್ತೆ ಸರ್ಕಾರ ರಚಿಸಲಿದೆ ಎಂದು ಭವಿಷ್ಯ ನುಡಿದರು. ಪಕ್ಷದ ಬಹುತೇಕ ಸಚಿವರು, ಸಂಸದರು, ಮುಖಂಡರು ಮತ್ತು ಅಸಂಖ್ಯಾತ ಕಾರ್ಯಕರ್ತರು ಭಾಗವಹಿಸಿದ್ದರು. ಕೈಕೊಟ್ಟ ಹೈಟೆಕ್ ರಥ:ಮುಲಾಯಂ ಸಿಂಗ್ ನಿಶಾನೆ ತೋರಿಸಿದ್ದ ಕಡು ಕೆಂಪು ಬಣ್ಣದ ಮರ್ಸಿಡಿಸ್ ಬೆಂಜ್ ಹೈಟೆಕ್ ರಥಯಾತ್ರೆಯು ಒಂದು ಕಿ.ಮೀ. ಸಾಗಿದ ನಂತರ ಅರ್ಧದಲ್ಲೇ ಕೆಟ್ಟು ಹೋಗಿದ್ದು, ಪ್ರಸ್ತುತ ಭಿನ್ನಾಭಿಪ್ರಾಯವನ್ನು ಅಣಕಿಸುವ ಕಾಕತಾಳೀಯದಂತಿತ್ತು. ನಂತರ ಅದನ್ನು ದುರಸ್ತಿಗೊಳಿಸಲಾಯಿತು. ಇದು ಪಕ್ಷವನ್ನು ರಿಪೇರಿ ಮಾಡಿದ ವಿದ್ಯಮಾನಕ್ಕೆ ಅನ್ವರ್ಥದಂತಿತ್ತು .

► Follow us on –  Facebook / Twitter  / Google+

Sri Raghav

Admin