ಯುಪಿಯಲ್ಲಿ ದಲಿತರು-ಠಾಕೂರ್’ರ ನಡುವೆ ಮತ್ತೆ ಹಿಂಸಾಚಾರ, ಯುವಕನ ಕೊಲೆ, ಮನೆಗಳಿಗೆ ಬೆಂಕಿ

Uttar-Pradesh------01

ಮೀರತ್, ಮೇ 24- ಉತ್ತರಪ್ರದೇಶದಲ್ಲಿ ದಲಿತರು ಮತ್ತು ಠಾಕೂರ್ ಸಮುದಾಯದ ನಡುವೆ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಶಹರನ್‍ಪುರ್ ಜಿಲ್ಲೆಯ ಶಬ್ಬಿರ್‍ಪುರ್ ಗ್ರಾಮದಲ್ಲಿ ದಲಿತ ಯುವಕನೊಬ್ಬನನ್ನು ಗುಂಪೊಂದು ಹತ್ಯೆ ಮಾಡಿದ ನಂತರ ಉಲ್ಬಣಗೊಂಡ ಹಿಂಸಾಚಾರದಲ್ಲಿ ಅನೇಕರು ಗಾಯಗೊಂಡಿದ್ದಾರೆ. ಅಲ್ಲದೇ ಠಾಕೂರ್ ಜನಾಂಗದವರ ಮನೆಗಳಿಗೆ ಅಗ್ನಿಸ್ಪರ್ಶ ಮಾಡಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದ್ದು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಶಬ್ಬಿರ್‍ಪುರ್ ಗ್ರಾಮದಲ್ಲಿ ಬಿಎಸ್‍ಪಿ ನಾಯಕಿ ಮಾಯಾವತಿ ಅವರ ಸಭೈಯಲ್ಲಿ ಭಾಗವಹಿಸಿ ನಿನ್ನೆ ಸಂಜೆ ಹಿಂದಿರುಗುತ್ತಿದ್ದ ಯುವಕರ ಮೇಲೆ ಗುಂಪೊಂದು ಗುಂಡು ಹಾರಿಸಿತು. ಈ ಘಟನೆಯಲ್ಲಿ ದಲಿತ ತರುಣ ಆಶೀಷ್ (24)ಮೃತಪಟ್ಟು, ಇತರ ನಾಲ್ವರು ಗಾಯಗೊಂಡರು.  ಈ ಸುದ್ದಿ ತಿಳಿಯುತ್ತಿದ್ದಂತೆ ಮಾರಕಾಸ್ತ್ರಗಳನ್ನು ಹೊಂದಿದ್ದ ದಲಿತರ ಗುಂಪೊಂದು ಗ್ರಾಮದಲ್ಲಿದ್ದ ಠಾಕೂರರ ನಿವಾಸಗಳ ಮೇಲೆ ದಾಳಿ ನಡೆಸಿದಾಗ ಘರ್ಷಣೆ ನಡೆದು ಅನೇಕರು ಗಾಯಗೊಂಡರು. ಉದ್ರಿಕ್ತ ಗುಂಪಿನ ಆಕ್ರೋಶಕ್ಕೆ ಅನೇಕ ಮನೆಗಳು ಬೆಂಕಿಗಾಹುತಿಯಾಗಿವೆ.

ಇದೇ ವೇಳೆ, ಮಾಯಾವತಿ ಸಭೆಯಿಂದ ಬೊಲೆರೋ ಕಾರಿನಲ್ಲಿ ಹಿಂದಿರುಗುತ್ತಿದ್ದ ಬಿಎಸ್‍ಪಿ ಕಾರ್ಯಕರ್ತರ ಮೇಲೂ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವಾಹನವನ್ನು ಜಖಂಗೊಳಿಸಿದೆ. ಜಾತಿ ಗಲಭೆ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು ಇಡೀ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂಥ ವಾತಾವರಣ ನೆಲೆಸಿದೆ. ಸ್ಥಳದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin