ಯುವಕರಿಗೆ ಗಾಂಜಾ ಮಾರುತ್ತಿದ್ದ ಅಪ್ಪ-ಮಗ ಅರೆಸ್ಟ್
ತುಮಕೂರು, ನ.19-ಯುವಕರನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ತಂದೆ ಮಗನನ್ನು ಹೆಬ್ಬರೂ ಠಾಣೆ ಪೊಲೀಸರು ಬಂಧಿಸಿದ್ದು , ಒಂದು ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇಫ್ರಾನ್, ಹುಸ್ಮಾನ್ ಬಂಧಿತ ತಂದೆ-ಮಗ. ಮಗ ಇಫ್ರಾನ್ ಮೂಲತಃ ಮುಂಬೈನವನಾಗಿದ್ದು, ಇತ್ತೀಚೆಗೆ ಹೆಬ್ಬೂರು ಹೋಬಳಿಯ ಎಂಎಸ್ ಪಾಳ್ಯದಲ್ಲಿರುವ ತಂದೆ ಉಸ್ಮಾನ್ ಮನೆಗೆ ಬಂದು ವಾಸವಾಗಿದ್ದನು.
ಈತ ಗಾಂಜಾ ಮಾರಾಟ ಮಾಡುವ ಸಂಪರ್ಕ ಹೊಂದಿದ್ದು , ಗಾಂಜಾವನ್ನು ಹತ್ತಾರು ಹಳ್ಳಿಗಳಲ್ಲಿ ಯುವಕರಿಗೆ ಮಾರಾಟ ಮಾಡುತ್ತಿದ್ದರು. ಅಲ್ಲದೆ ಮುಂಬೈನಲ್ಲಿರುವ ತನ್ನ ಸಹಚರರಿಗೆ ಕೂಡ ಇಫ್ರಾನ್ ಗಾಂಜಾ ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದರು. ಉಸ್ಮಾನ್ ಮನೆಯಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಅವರ ಮಾಹಿತಿ ಮೇರೆಗೆ ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ತಂಡ ರಚಿಸಿಕೊಂಡು ಸಾರ್ವಜನಿಕರ ಸೋಗಿನಲ್ಲಿ ಗಾಂಜಾ ಕೊಳ್ಳುವ ನೆಪದಲ್ಲಿ ಉಸ್ಮಾನ್ ಮನೆಗೆ ತೆರಳಿದಾಗ ಗಾಂಜಾ ಮಾರಾಟ ಮಾಡುವುದು ಖಚಿತಗೊಂಡಿದೆ.
ಇವರನ್ನು ವಿಚಾರಣೆಗೊಳಪಡಿಸಿದಾಗ ಸಿಎಸ್ಪುರದಲ್ಲಿರುವ ಉಂಗುರ ಗ್ರಾಮದ ನಿವಾಸಿ ಅಮವಾಸ್ಯೆಯ ನಾಗಮ್ಮ ಎಂಬುವರಿಂದ ಗಾಂಜಾ ಖರೀದಿ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ. ಆರೋಪಿಗಳಿಂದ ಒಂದು ಕೆಜಿಯಷ್ಟು ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್ಪೆಕ್ಟರ್ ಕೆ.ರಾಘವೇಂದ್ರ, ಪಿಎಸ್ಐ ಕಾಂತರಾಜ್, ಸಿಬ್ಬಂದಿಗಳಾದ ಆಯೂಬ್ ಜಾನ್, ನಾಗರಾಜ್, ಮಲ್ಲೇಶ್ ಇತರರು ಇದ್ದರು.