ಯೋಗೇಶ್ವರ್‍ ಗೆ ಮಾನ, ಮರ್ಯಾದೆ ಇದ್ದರೆ ತನ್ನ ತಮ್ಮನಿಂದ ರಾಜೀನಾಮೆ ಕೊಡಿಸಲಿ : ಡಿಕೆಶಿ

dk--shivakumar

ಬೆಂಗಳೂರು, ನ.29- ಶಾಸಕ ಸಿ.ಪಿ.ಯೋಗೇಶ್ವರ್‍ಗೆ ಮಾನ, ಮರ್ಯಾದೆ ಇದ್ದರೆ ಅವರ ತಮ್ಮನಿಂದ ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.  ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಆದರೆ, ತಮ್ಮನಿಂದ ರಾಜೀನಾಮೆ ಕೊಡಿಸಿಲ್ಲ. ತಾವು ಹೇಳಿದ್ದೇನೆ. ಅವರು ಕೊಟ್ಟಿಲ್ಲ ಎಂದು ನಾಟಕವಾಡುತ್ತಿದ್ದಾರೆ. ಇವರನ್ನು ನಂಬಿ ನಾವು ಕಾಂಗ್ರೆಸ್ ಸದಸ್ಯರನ್ನು ಕಾಡಿಬೇಡಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರನ್ನಾಗಿ ಮಾಡಿದೆವು. ಕೊಟ್ಟ ಮಾತಿನಂತೆ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜಕೀಯವಾಗಿ ನಾನು ಯಾರನ್ನೂ ದ್ವೇಷಿಸುವುದಿಲ್ಲ. ಚನ್ನಪಟ್ಟಣ ಕ್ಷೇತ್ರಕ್ಕೆ ಜೆಡಿಎಸ್‍ನಿಂದ ಅನಿತಾ ಕುಮಾರಸ್ವಾಮಿ ಬಂದು ಸ್ಪರ್ಧಿಸಿದರೂ ನಾವು ಗೌರವಿಸುತ್ತೇವೆ. ಅವರು ನನ್ನ ಸಹೋದರಿ ಇದ್ದಂತೆ. ಅವರು ಕೂಡ ನನ್ನನ್ನು ಅಣ್ಣ ಎಂದು ಪ್ರೀತಿ ಗೌರವದಿಂದ ಮಾತನಾಡುತ್ತಾರೆ. ಕುಮಾರಸ್ವಾಮಿ ಅವರನ್ನು ನಾನು ಮಾತನಾಡಿಸುತ್ತೇನೆ. ನಾಳೆ ಯೋಗೇಶ್ ಎದುರಿಗೆ ಸಿಕ್ಕರೂ ಮಾತನಾಡಿಸಲು ಮುಜುಗರ ಪಡುವುದಿಲ್ಲ. ಹಾಗೆಂದು ಯಾರೊಂದಿಗೂ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳುವುದಿಲ್ಲ ಎಂದರು.

ಚನ್ನಪಟ್ಟಣ ಕ್ಷೇತ್ರಕ್ಕೆ ಸ್ಥಳೀಯ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತೇವೆ. ಡಿ.ಕೆ.ಸುರೇಶ್ ಅವರು ಸಂಸದರಾಗಿರುವುದರಿಂದ ಅವರ ಸ್ಪರ್ಧೆಗೆ ಹೈಕಮಾಂಡ್ ಒಪ್ಪುವುದು ಕಷ್ಟವಿದೆ. ಇತಿಹಾಸದಲ್ಲೇ ಇಷ್ಟು ಒಳ್ಳೆಯ ಸಂಸದರು ಸಿಕ್ಕಿಲ್ಲ ಎಂದು ಜನಕೊಂಡಾಡುತ್ತಿದ್ದಾರೆ. ಆದರೆ, ಸುರೇಶ್ ಅವರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕೆಂದು ಬಹಳಷ್ಟು ಕ್ಷೇತ್ರದಿಂದ ಬೇಡಿಕೆ ಬಂದಿದೆ ಎಂದು ತಿಳಿಸಿದರು. ನಟಿ ರಮ್ಯಾ ಅವರು ಎಐಸಿಸಿ ಸಾಮಾಜಿಕ ಜಾಲ ತಾಣವನ್ನು ನಿಭಾಯಿಸುವ ಪ್ರಮುಖ ಜವಾಬ್ದಾರಿ ಹೊತ್ತಿದ್ದಾರೆ. ಅವರು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನನ್ನ ಟೀಮ್‍ನ ಸ್ಟಾರ್ ಕ್ಯಾಂಪೇನರ್ ಆಗಿರುತ್ತಾರೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಹೈಕಮಾಂಡ್ ಸೂಚಿಸಿದರೆ ಸ್ವಾಗತಿಸುವುದಾಗಿ ಹೇಳಿದರು.

Sri Raghav

Admin