ರಕ್ತದಾನ ಮಾಡಿದ ನಟ ಮಂಡ್ಯ ರಮೇಶ್
ನಂಜನಗೂಡು, ಆ.24- ರಕ್ತದಾನವು ತ್ಯಾಗದ ಸಂಕೇತವಾಗಿದೆ ಎಂದು ರಂಗಕರ್ಮಿ ಹಾಗೂ ನಟ ಮಂಡ್ಯ ರಮೇಶ್ ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ರೆಡ್ಕ್ರಾಸ್ ಸೊಸೈಟಿ ಘಟಕ ಉದ್ಘಾಟನೆ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಜೀವನದಲ್ಲಿ ಅನೇಕ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಬೇರೆಯವರ ಪ್ರಚೋದನೆ ಮಾತಿಗೆ ಒಳಗಾಗದೆ ನಿಮ್ಮಲ್ಲಿರುವ ವೈಚಾರಿಕತೆ ರೂಪಿಸಿಕೊಂಡು ಆ ವಿಚಾರವಂತಿಕೆಗೆ ಮಾನವೀಯ ನೆಲೆಗಟ್ಟನ್ನು ರೂಪಿಸಿಕೊಂಡಾಗ ಮಾತ್ರ ನಿಮ್ಮ ಬದುಕಿಗೊಂದು ಅರ್ಥಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ನಂಜರಾಜ ಅರಸ್ ಮಾತನಾಡಿ, ರಕ್ತದಾನ, ನೇತ್ರದಾನ ಶ್ರೇಷ್ಠವಾದ ದಾನವಾಗಿದ್ದು, ಸಾವಿನ ನಂತರ ಅಳಿಯುವ ಈ ದೇಹದಲ್ಲಿನ ಅಂಗಾಂಗಗಳನ್ನು ದಾನ ಮಾಡುವುದರಿಂದ ಎಷ್ಟೋ ಸಾವಿರ ಸಾವಿನಂಚಿನಲ್ಲಿರುವ ಜೀವಗಳಿಗೆ ಮರುಜೀವನ ನೀಡಿದಂತಾಗುತ್ತದೆ ಎಂದರು. ಮೈಸೂರು ಕೆಆರ್ ಆಸ್ಪತ್ರೆ ರಕ್ತನಿಧಿ ಬ್ಯಾಂಕ್ ನಿರ್ದೇಶಕ ಮಂಜುನಾಥ್ ಮಾತನಾಡಿ, ರಕ್ತವು ಅತ್ಯಂತ ಅಮೂಲ್ಯ ವಸ್ತುವಾಗಿದ್ದು, ರಕ್ತದಾನದಿಂದ ನಾಲ್ಕು ಜನರಿಗೆ ಜೀವ ನೀಡಿದಂತಾಗುತ್ತದೆ. ಅಪಘಾತಕ್ಕೊಳಗಾದವರಿಗೆ ಪ್ರತಿದಿನ 40 ಯೂನಿಟ್ ರಕ್ತ ಒದಗಿಸುತ್ತೇವೆ. ಆದ್ದರಿಂದ ಅಪಘಾತ ತಪ್ಪಿಸಲು ಸುರಕ್ಷತೆಯ ಮಾರ್ಗ ಅನುಸರಿಸಿ ಎಂದರು.
ಪ್ರಾಂಶುಪಾಲ ಸಿದ್ದರಾಜು ಮಾತನಾಡಿ, ನಮ್ಮ ಕಾಲೇಜು ಅತ್ಯಂತ ಹೆಚ್ಚು ವಿದ್ಯಾರ್ಥಿಗಳನ್ನೊಳಗೊಂಡ ರಾಜ್ಯದ ಎರಡನೆ ಕಾಲೇಜಗಿದ್ದರೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದರೂ ಸಹ ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹೆಚ್ಚು ಸಾಧನೆ ಮಾಡಿದ್ದಾರೆ ಎಂದರು. ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಕಲಾವತಿ, ರೆಡ್ಕ್ರಾಸ್ ಸಂಸ್ಥೆಯ ಸಂಚಾಲಕಿ ಡಾ.ಕೋಮಲಾ, ಪ್ರಾಧ್ಯಾಪಕರಾದ ಪ್ರೊ.ಮಹದೇವ ಭರಣಿ, ಡಾ.ಶೈಲಜ, ಕವಿತಾ, ಜಗದೀಶ್, ಮಧುಸೂಧನ್, ತೇಜಸ್ವಿನಿ, ಡಾ.ಪ್ರಮೀಳಾ, ಸೋಮಶೇಖರ್, ಮಹದೇವಯ್ಯ, ಶಿವಸ್ವಾಮಿ, ಹರೀಶ್, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಜರಿದ್ದರು.
► Follow us on – Facebook / Twitter / Google+