ರಸ್ತೆ ಅಭಿವೃದ್ದಿಗೆ ರಾಜಕೀಯ ಪ್ರತಿಷ್ಠೆ ಅಡ್ಡಿ

kunigal

ಕುಣಿಗಲ್,ಸೆ.12-ಪಟ್ಟಣದ ಮುಖ್ಯರಸ್ತೆ ಅಭಿವೃದ್ದಿಗೆ ಹಣ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಕಾಮಗಾರಿ ಆರಂಭಿಸಲು ಪಟ್ಟಭದ್ರ ಹಿತಾಸಕ್ತಿಗಳ ಅಡ್ಡಿಯಿಂದಾಗಿ ನೆನಗುದಿಗೆ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ 48ರ ಅಂಚೆಪಾಳ್ಯದಿಂದ ಆಲಪ್ಪನಗುಡ್ಡೆವರೆಗೆ ರಸ್ತೆ ಅಭಿವೃದ್ದಿಗಾಗಿ ಶಾಸಕರು ಸರ್ಕಾರದಿಂದ 16 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿಸಿದ್ದು, ಪ್ರತಿಷ್ಠಿತ ಕಂಪನಿಯಾದ ಜಿಎಂಆರ್ ಕನ್‍ಸ್ಟ್ರಕ್ಷನ್‍ಗೆ ಕಾಮಗಾರಿ ನಿರ್ವಹಿಸಲು ಗುತ್ತಿಗೆ ನೀಡಲಾಗಿದೆ. ಆದರೆ ಕೀಳು ರಾಜಕೀಯ ಪ್ರತಿಷ್ಠೆಯಿಂದಾಗಿ ಕಾಮಗಾರಿ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಕಳೆದ 10 ವರ್ಷಗಳಿಂದಲೂ ಪಟ್ಟಣದಲ್ಲಿ ರಸ್ತೆ ಅಭಿವೃದ್ದಿ ಮರಿಚೀಕೆಯಾಗಿ ಉಳಿದಿತ್ತು. 2008ರಲ್ಲಿ ಅಂದಿನ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಅವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಅಂಗಡಿಮುಂಗಟ್ಟುಗಳನ್ನು ತೆರವುಗೊಳಿಸಿದರೆ ವಿನಃ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಸಲು ಸಾಧ್ಯವಾಗಲಿಲ್ಲ.
ಆದರೆ ಹಿರಿಯ ಅನುಭವಿ ಶಾಸಕರಾದ ಡಿ.ನಾಗರಾಜಯ್ಯನವರು ಜೆಡಿಎಸ್ ಶಾಸಕರಾಗಿದ್ದರೂ ಮುಖ್ಯಮಂತ್ರಿಗಳ ಆಪ್ತರಾಗಿದ್ದು , ರಸ್ತೆ ಅಭಿವೃದ್ದಿಗೆ ಹಣ ತರುವಲ್ಲಿ ಯಶಸ್ವಿಯಾದರು. ಆದರೆ ಸ್ಥಳೀಯ ವಿರೋಧ ಪಕ್ಷದ ಕೆಲವು ಜನಪ್ರತಿನಿಧಿಗಳು ರಸ್ತೆ ಅಭಿವೃದ್ದಿಗೆ ಸಹಕರಿಸದೆ ಅಡ್ಡಿಪಡಿಸುತ್ತಿರುವುದು ವಿಷಾದದ ವಿಚಾರ. ರಸ್ತೆ ಮಧ್ಯಭಾಗದಿಂದ ಎರಡು ಕಡೆ 50 ಅಡಿ ರಸ್ತೆ ಮಾಡುವಂತೆ ಪುರಸಭೆಯಲ್ಲಿ ಠರಾವು ಅಂಗೀಕರಿಸಲಾಗಿದೆ. ಆದರೆ ಪುರಸಭೆಯ ಕೆಲವು ಸದಸ್ಯರ ಕುಮಕ್ಕಿನಿಂದಾಗಿ ಬಲಾಢ್ಯ ವರ್ತಕರು ಅಕ್ರಮ ಕಟ್ಟಡವನ್ನು ತೆರವುಗೊಳಿಸಲು ಸಹಕರಿಸದೆ ನ್ಯಾಯಾಲಯದ ತಡೆಯಾಜ್ಞೆ ತಂದು ರಸ್ತೆ ರಿಪೇರಿ ಮಾಡಲು ಕಂಟಕಪ್ರಾಯವಾಗಿದ್ದಾರೆ. ಹಾಸನ, ಬೆಂಗಳೂರು ಪ್ರಮುಖ ರಸ್ತೆಯಾದ ರಸ್ತೆ ಅಭಿವೃದ್ದಿಯಲ್ಲಿ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನಿಸದೇ ಕೇವಲ ರಾಜಕೀಯ ಪ್ರತಿಷ್ಠೆಗೋಸ್ಕರ ಕಾಮಗಾರಿಗೆ ಅಡ್ಡಿಪಡಿಸುತ್ತಿರುವ ಕೆಲವು ಕಿಡಿಗೇಡಿ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮುಂದಿನ ದಿನಗಳಲ್ಲಿ ಪಟ್ಟಣದ ಜನತೆಗೆ ಬುದ್ದಿ ಕಲಿಸಲಿದ್ದಾರೆ ಎಂದು ಭಾರತೀಯ ಕೃಷಿಕ ಸಮಾಜದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬುಕ್ಕಸಾಗರ ಕೃಷ್ಣೇಗೌಡ ಕಿಡಿಕಾರಿದ್ದಾರೆ.

 

► Follow us on –  Facebook / Twitter  / Google+

 

 

Sri Raghav

Admin