ರಾಜಕಾಲುವೆ ಒತ್ತುವರಿ ಪತ್ತೆಹಚ್ಚಿದ್ದ ಖಡಕ್ ಅಧಿಕಾರಿಯ ಎತ್ತಂಗಡಿ
ಬೆಂಗಳೂರು, ಆ.5- ರಾಜಕಾಲುವೆ ಒತ್ತುವರಿ ಪತ್ತೆಯಂತಹ ಮಹತ್ತರ ಕಾರ್ಯನಿರ್ವಹಿಸಿ ಅದನ್ನು ಇನ್ನೇನು ತೆರವುಗೊಳಿಸಲು ಮುಂದಾಗಬೇಕು ಎನ್ನುವಷ್ಟರಲ್ಲಿ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ, ದಕ್ಷ ಅಧಿಕಾರಿ ಎಲ್.ಸಿ.ನಾಗರಾಜ್ ಅವರನ್ನು ಸರ್ಕಾರ ರಾಯಚೂರಿಗೆ ವರ್ಗಾವಣೆ ಮಾಡಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಜಲಪ್ರಳಯ ಉಂಟಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ಬಿ ಸೇರಿದಂತೆ ಎಲ್ಲ ಅಧಿಕಾರಿಗಳ ಸಭೆ ಕರೆದು ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಒತ್ತುವರಿಯನ್ನು ಪತ್ತೆಯಂತಹ ಮಹತ್ಕಾರ್ಯ ಮಾಡಿದ್ದ ನಗರ ಉಪವಿಭಾಗಾಧಿಕಾರಿ ನಾಗರಾಜ್ ಅವರನ್ನು ದಿಢೀರ್ ಬೆಳವಣಿಗೆಯಲ್ಲಿ ವರ್ಗಾವಣೆ ಮಾಡಲಾಗಿದೆ. ಈ ನಿರ್ಧಾರದ ಹಿಂದೆ ಪ್ರಭಾವಿ ಒತ್ತುವರಿದಾರರ ಲಾಬಿ ಇದೆ ಎಂಬ ಅನುಮಾನ ಕಾಡತೊಡಗಿದೆ.
ನಗರದ ಪಂತರಪಾಳ್ಯ ಮತ್ತು ದೊಡ್ಡಬೆಲೆ ಸಮೀಪ 1800 ಕೋಟಿ ಮೌಲ್ಯದ 63 ಎಕರೆ ಭೂಮಿ ಒತ್ತುವರಿಯನ್ನು ಎ.ಸಿ.ನಾಗರಾಜ್ರವರು ಪತ್ತೆಹಚ್ಚಿದ್ದರು. ಈ ಒತ್ತುವರಿ ಪ್ರಕರಣದಲ್ಲಿ ಗಣ್ಯರ ಕೈವಾಡವಿತ್ತು. ಇವರ ವರ್ಗಾವಣೆಯಲ್ಲಿ ಈ ಪ್ರಭಾವಿಗಳ ಪಾತ್ರವಿರಬಹುದು ಎಂದು ಹೇಳಲಾಗಿದೆ. ಇದಲ್ಲದೆ, ಬಿಎಂ ಕಾವಲ್ ಮತ್ತಿತರ ಕಡೆ ಕೆರೆ, ಸರ್ಕಾರಿ ಭೂಮಿ, ರಾಜಕಾಲುವೆ ಒತ್ತುವರಿ ಮಾಡಿದವರಿಗೆ ನಾಗರಾಜ್ ನೋಟಿಸ್ ನೀಡಿದ್ದರು. ಯಾವುದೇ ಒತ್ತಡಕ್ಕೊಳಗಾಗದೆ ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳೊಳಗೆ ಒತ್ತುವರಿ ತೆರವು ಮಾಡುವಂತೆ ಒತ್ತುವರಿದಾರರಿಗೆ ನೋಟಿಸ್ ನೀಡಿದ್ದರು. ತೆರವು ಕಾರ್ಯ ಶೀಘ್ರದಲ್ಲೇ ಆರಂಭವಾಗಲಿತ್ತು. ಅಷ್ಟರೊಳಗೆ ಅವರನ್ನು ವರ್ಗಾವಣೆ ಮಾಡಿಸುವಲ್ಲಿ ಪ್ರಭಾವಿ ಒತ್ತುವರಿದಾರರು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಬಿದ್ದ ಮಳೆಯಿಂದ ದೇವರಚಿಕ್ಕನಹಳ್ಳಿ, ಸಾರಕ್ಕಿ ಪ್ರದೇಶ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿತ್ತು. ರಾಜಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯದೆ ಮನೆ, ಅಪಾರ್ಟ್ಮೆಂಟ್, ರಸ್ತೆಗಳಿಗೆ ನುಗ್ಗಿ ತೀವ್ರ ತೊಂದರೆ ಅನುಭವಿಸಬೇಕಾಗಿತ್ತು. ರಾಜಕಾಲುವೆ ಒತ್ತುವರಿ ಇದಕ್ಕೆಲ್ಲ ಕಾರಣವಾಗಿತ್ತು. ಇಂತಹ ಒತ್ತುವರಿ ತೆರವುಗೊಳಿಸಲು ಮುಖ್ಯಮಂತ್ರಿಗಳೇ ಸೂಚಿಸಿದ್ದರು. ಒತ್ತುವರಿ ತೆರವಿಗೆ ಮುಂದಾಗಬೇಕಾದ ಸಂದರ್ಭದಲ್ಲಿ ಖಡಕ್ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಿರುವುದು ಸರ್ಕಾರದ ನಡೆಯ ಮೇಲೆ ಅನುಮಾನ ಮೂಡಿಸಿದೆ.