ರಾಜಕೀಯದಿಂದ ದೂರ ಸರಿಯಲು ನಿರ್ಧರಿಸಿದ ಮಾಜಿ ಸಚಿವ ರಾಮಚಂದ್ರೇಗೌಡ ..?

Ramachandregwada--01

ಬೆಂಗಳೂರು, ಸೆ.28 – ವಿಧಾನಪರಿಷತ್ ಸದಸ್ಯ, ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ರಾಮಚಂದ್ರೇಗೌಡ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿಯಲು ತೀರ್ಮಾನಿಸಿದ್ದಾರೆ. ಮುಂದಿನ ಜೂನ್‍ನಲ್ಲಿ ನಡೆಯಲಿರುವ ಬೆಂಗಳೂರು ಪದವೀಧರ ವಿಧಾನಪರಿಷತ್ ಕ್ಷೇತ್ರಕ್ಕೆ ಸ್ಪರ್ಧಿಸದಿರಲು ಗೌಡರು ನಿರ್ಧಾರ ಕೈಗೊಂಡಿರುವುದು ಪಕ್ಷದಲ್ಲಿ ನಾನಾ ವ್ಯಾಖ್ಯಾನಗಳನ್ನು ಹುಟ್ಟುಹಾಕಿದೆ.  ಈಗಾಗಲೇ ತಮ್ಮ ಆಪ್ತರ ಬಳಿ ಸಕ್ರಿಯ ಚುನಾವಣೆಗೆ ವಿದಾಯ ಹೇಳುವುದಾಗಿ ಹೇಳಿಕೊಂಡಿರುವ ಅವರು, ಯುವಕರಿಗೆ ಆದ್ಯತೆ ಸಿಗಲಿ ಎಂಬ ಕಾರಣಕ್ಕಾಗಿ ಈ ತೀರ್ಮಾನಕ್ಕೆ ಬಂದಿದ್ದರೆ ಎನ್ನಲಾಗಿದೆ.
ಅಲ್ಲದೆ, ಬಿಜೆಪಿಯಲ್ಲಿ ತೆಗೆದುಕೊಂಡಿರುವ ಒಂದು ಸಾಲಿನ ನಿರ್ಣಯದಂತೆ 75 ವರ್ಷ ದಾಟಿದವರಿಗೆ ಪಕ್ಷದಲ್ಲಿ ಯಾವುದೇ ರೀತಿಯ ಸ್ಥಾನಮಾನ ಸಿಗುವುದಿಲ್ಲ. ಕೇವಲ ಮಾರ್ಗದರ್ಶಕರಾಗಿ ಉಳಿಯಬೇಕಾಗುತ್ತದೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿರುವ ರಾಮಚಂದ್ರೇಗೌಡರು, ಸಕ್ರಿಯ ರಾಜಕಾರಣಕ್ಕೆ ಗುಡ್‍ಬೈ ಹೇಳಲು ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಗೆ ಭದ್ರಬುನಾದಿ ಹಾಕಿದವರಲ್ಲಿ ರಾಮಚಂದ್ರೇಗೌಡರು ಕೂಡ ಒಬ್ಬರು. ಎ.ಕೆ.ಸುಬ್ಬಯ್ಯ, ಬಿ.ಬಿ.ಶಿವಪ್ಪ, ಬಿ.ಎಸ್.ಯಡಿಯೂರಪ್ಪ, ಡಾ.ಎ.ತಂಗ, ಬಸವರಾಜಪಾಟೀಲ್ ಸೇಡಂ, ಆರ್‍ಎಸ್‍ಎಸ್ ನಾಯಕರಾದ ಬೃಂಗೇಶ್‍ಬೆಂಡೆ, ಮೈ.ಚ.ಜಯದೇವ ಸೇರಿದಂತೆ ಸಂಘ ಪರಿವಾರದ ಹಿರಿಯ ನಾಯಕರ ಜತೆ ಹೆಗಲಿಗೆ ಹಗೆಲು ಕೊಟ್ಟವರು.  ಬೆಂಗಳೂರು ಕಾರ್ಪೊರೇಷನ್ ಮೂಲಕ್ಕ ತಮ್ಮ ರಾಜಕೀಯ ಜೀವನ ಆರಂಭಿಸಿದ ಗೌಡರು 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಆದರೆ, ಆ ವೇಳೆ ಅವರ ಮೇಲೆ ಕೇಳಿ ಬಂದ ಸಣ್ಣ ಆರೋಪವೊಂದು ಗೌಡರಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು. ಹೀಗಾಗಿ ಸ್ವಯಂ ಪ್ರೇರಿತರಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಇತರರಿಗೂ ಮೇಲ್ಪಂಕ್ತಿಯನ್ನು ಅನುಸರಿಸಿದ್ದರು.

ಪಕ್ಷ ನಿಷ್ಟೆ, ಸಂಘ ಪರಿವಾರದ ನಾಯಕರ ಜತೆ ಆತ್ಮೀಯ ಒಡನಾಟ, ರಾಜಕೀಯ ವಲಯದಲ್ಲಿ ಅಜಾತಶತ್ರುವೆಂದೇ ಗುರುತಿಸಿಕೊಂಡಿದ್ದ ಗೌಡರು, ಬೆಂಗಳೂರು ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‍ಗೆ ಆಯ್ಕೆಯಾಗಿದ್ದರು. ಇದೀಗ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ.

ಗರಿಗೆದರಿದ ಚಟುವಟಿಕೆ:

ರಾಮಚಂದ್ರೇಗೌಡರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ಮುಂದಿನ ವರ್ಷ ನಡೆಯುವ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿಯಲ್ಲಿ ಈಗಾಗಲೇ ಹಲವು ಹೆಸರುಗಳು ಕೇಳಿ ಬರುತ್ತಿವೆ. ಪಕ್ಷ ಈವರೆಗೂ ಯಾರೊಬ್ಬರಿಗೂ ಟಿಕೆಟ್ ಭರವಸೆಯನ್ನು ನೀಡಿಲ್ಲವಾದರೂ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತಿದೆ. ಮೂಲಗಳ ಪ್ರಕಾರ ಬಿಜೆಪಿ ಸಹ ವಕ್ತಾರ ಹಾಗೂ ಪಕ್ಷದಲ್ಲಿ ಎಲ್ಲರ ಜತೆ ಆತ್ಮೀಯ ಒಡನಾಟ ಹೊಂದಿರುವ ಎ.ಎಚ್.ಆನಂದ್ ಅವರಿಗೆ ಟಿಕೆಟ್ ಬಹುತೇಕ ಖಚಿತ ಎನ್ನಲಾಗಿದೆ.

ಆನಂದ್ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲು ಬಹುತೇಕ ಎಲ್ಲಾ ನಾಯಕರು ಒಪ್ಪಿಗೆ ಸೂಚಿಸಿದ್ದು, ಅಧಿಕೃತವಾಗಿ ರಾಜ್ಯಾಧ್ಯಕ್ಷ ಒಪ್ಪಿಗೆ ಮಾತ್ರ ಬಾಕಿ ಇದೆ ಎಂದು ತಿಳಿದು ಬಂದಿದೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಅವರಿಗೆ ಕೆಲ ಹಿರಿಯ ನಾಯಕರು ಮೌಖಿಕ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಈಗಾಗಲೇ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Sri Raghav

Admin