ರಾಜರಾಜೇಶ್ವರಿ`ಮುನಿ’ಯುವಳೋ ಒಲಿಯುವಳೋ..?

Rajarajeshwari-Nagar--01

– ರಮೇಶ್ ಪಾಳ್ಯ

ಕ್ಷೇತ್ರ ಪುನರ್‍ವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂದಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಮಬಲದ ಹೋರಾಟ ನಡೆಯಲಿದೆ. ಮೊದಲ ಬಾರಿಗೆ 2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಎಂ.ಶ್ರೀನಿವಾಸ್ ಶಾಸಕರಾಗಿ ಆರಿಸಿ ಬಂದಿದ್ದರು. 2013ರ ಚುನಾವಣೆಯಲ್ಲಿ ಬಿಬಿಎಂಪಿ ಸದಸ್ಯರಾಗಿದ್ದುಕೊಂಡೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿದ ಮುನಿರತ್ನ ಅವರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್‍ನ ತಿಮ್ಮನಂಜಯ್ಯ ಅವರನ್ನು 18 ಸಾವಿರ ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರೆ, ಬಿಜೆಪಿ ಅಭ್ಯರ್ಥಿ ಎಂ.ಶ್ರೀನಿವಾಸ್ ಅವರು ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟರು. ಎಂ.ಶ್ರೀನಿವಾಸ್ ಅವರು ಸೋಲನುಭವಿಸುತ್ತಿದ್ದಂತೆ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಮುಂಬರುವ ಚುನಾವಣೆಯಲ್ಲಿ ಮುನಿರತ್ನ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ.

ಒಕ್ಕಲಿಗರೇ ಹೆಚ್ಚಿರುವ ಆರ್‍ಆರ್ ನಗರಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಪ್ರಚಾರಕ್ಕೆ ಕರೆತಂದರೆ ಜೆಡಿಎಸ್‍ಗೆ ಗೆಲುವು ಕಟ್ಟಿಟ್ಟ ಬುತ್ತಿ ಎನ್ನುವ ವಾದ ಮಂಡಿಸಿರುವ ಬಿಬಿಎಂಪಿ ಮಾಜಿ ಸದಸ್ಯ ಆರ್.ಪ್ರಕಾಶ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.

ಬಿಜೆಪಿಯಲ್ಲೂ ಒಕ್ಕಲಿಗ ಅಭ್ಯರ್ಥಿಗಳಿಗೆ ಮಣೆ ಹಾಕಿದರೆ, ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರಪ್ಪ ಅಥವಾ ತುಳಸಿ ಮುನಿರಾಜುಗೌಡ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ. ಎರಡು ಬಾರಿ ಬಿಬಿಎಂಪಿ ಸದಸ್ಯರಾಗಿ ಆರಿಸಿ ಬಂದಿದ್ದ ರಾಮಚಂದ್ರಪ್ಪ ಅವರು ಮಾಜಿ ಡಿಸಿಎಂ ಆರ್.ಅಶೋಕ್ ಅವರ ಬಲಗೈ ಬಂಟ. ಇವರು 2008ರಿಂದಲೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಎರಡು ಬಾರಿ ಅವರಿಗೆ ಟಿಕೆಟ್ ಕೈ ತಪ್ಪಿತ್ತು.  ಆ ಸಂದರ್ಭದಲ್ಲಿ ಅಶೋಕ್ ಸೇರಿದಂತೆ ಹಲವು ಹಿರಿಯ ಮುಖಂಡರು ಮುಂದಿನ ಬಾರಿ ನಿಮಗೆ ಟಿಕೆಟ್ ನೀಡಲಾಗುವುದು ಎಂಬ ಭರವಸೆ ನೀಡಿದ ಹಿನ್ನೆಲೆಯಲ್ಲಿ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಶುರುವಿಟ್ಟುಕೊಂಡಿದ್ದಾರೆ.

ಈ ಮಧ್ಯೆ ತುಳಸಿ ಮುನಿರಾಜು ಮತ್ತು ಖ್ಯಾತ ಚಿತ್ರನಟ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಅವರ ಹೆಸರುಗಳು ಕೇಳಿಬರುತ್ತಿದ್ದು, ಈ ಮೂವರಲ್ಲಿ ಒಬ್ಬರಿಗೆ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಖಚಿತ.  ಮುನಿರತ್ನ ಅವರು ಶಾಸಕರಾಗಿ ಆರಿಸಿ ಬಂದ ನಂತರ ಕ್ಷೇತ್ರದ ಎಲ್ಲ ಬಿಬಿಎಂಪಿ ಸದಸ್ಯರುಗಳ ವಿರೋಧ ಕಟ್ಟಿಕೊಂಡಿದ್ದರು. ಅವರ ವಿರುದ್ಧ ಕಾಂಗ್ರೆಸ್ ಪಕ್ಷದವರೇ ಆದ ಬಿಬಿಎಂಪಿ ಸದಸ್ಯೆ ಆಶಾ ಸುರೇಶ್, ಮಾಜಿ ಸದಸ್ಯ ಗೋವಿಂದರಾಜು, ಬಿಜೆಪಿ ಸದಸ್ಯೆ ಮಮತಾ ವಾಸುದೇವ್, ಜೆಡಿಎಸ್‍ನ ಮಂಜುಳಾ ನಾರಾಯಣಸ್ವಾಮಿ, ಸ್ಥಳೀಯ ಕಾಂಗ್ರೆಸ್ ಮುಖಂಡರುಗಳು ಮುನಿಸಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಹಾಲಿ ಮತ್ತು ಮಾಜಿ ಬಿಬಿಎಂಪಿ ಸದಸ್ಯರುಗಳು ಒಂದಾಗಿ ಮುನಿರತ್ನ ವಿರುದ್ಧ ಪ್ರಚಾರ ಮಾಡುವ ಸಾಧ್ಯತೆ ಇರುವುದರಿಂದ ಮುನಿರತ್ನ ಅವರ ಗೆಲುವು ಈ ಬಾರಿ ಅಷ್ಟು ಸುಲಭವಾಗಿರುವುದಿಲ್ಲ. ಮುನಿರತ್ನ ಅವರ ವಿರೋಧಿ ಅಲೆ ಬಿಜೆಪಿ ಇಲ್ಲವೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ವರದಾನವಾದರೂ ಅಚ್ಚರಿ ಪಡುವಂತಿಲ್ಲ. ಆದರೆ, ತಮ್ಮದೇ ಆದ ಮತಬ್ಯಾಂಕ್ ಹೊಂದಿರುವ ಮುನಿರತ್ನ ಅವರು ಗೆಲುವು ನನ್ನದೇ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.   ಅವರ ಈ ಲೆಕ್ಕಾಚಾರಕ್ಕೆ ರಾಜರಾಜೇಶ್ವರಿ ಮುನಿಯುವಳೋ ಒಲಿಯುವಳೋ ಎಂಬುದನ್ನು ಕಾಲವೇ ನಿರ್ಧರಿಸಲಿದೆ.

Sri Raghav

Admin