ರಾಜೀನಾಮೆ ನೀಡಿ, ಇಲ್ಲವೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ : ಯಡಿಯೂರಪ್ಪ

Spread the love

Yadiyurappa--Siddaramaiaha

ಬೆಂಗಳೂರು,ಫೆ.24-ಕಾಂಗ್ರೆಸ್ ಹೈಕಮಾಂಡ್‍ಗೆ ಸಚಿವರು ಕಪ್ಪ ಕಾಣಿಕೆ ನೀಡಿರುವುದು ಡೈರಿಯಲ್ಲಿ ಬಹಿರಂಗಗೊಂಡಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ಇಲ್ಲವೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ.  ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇವೆ ಎಂದು ಬೊಬ್ಬೆ ಹಾಕುತ್ತಿದ್ದ ಸಿದ್ದರಾಮಯ್ಯನವರ ನಿಜಬಣ್ಣ ಬಯಲಾಗಿದೆ. ನಾನು ಆರಂಭದಲ್ಲೇ ಇದರ ಬಗ್ಗೆ ಸುಳಿವು ನೀಡಿದ್ದರೂ ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರು ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ್ಯಾರು ಎಷ್ಟೆಷ್ಟು ಹಣ ನೀಡಿದ್ದಾರೆಂಬು ಡೈರಿಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ್ದರೆ ಸಚಿವರಿಗೆ ಇಷ್ಟು ಹಣ ಎಲ್ಲಿಂದ ಬಂತು, ಯಾವ ಕಾರಣಕ್ಕಾಗಿ ನೀವು ಹಣ ನೀಡಿದ್ದೀರಿ ಎಂಬುದನ್ನು ರಾಜ್ಯದ ಜನತೆ ಮುಂದೆ ಬಹಿರಂಗಪಡಿಸಿ ಎಂದು ಒತ್ತಾಯಿಸಿದರು.   ಹೈಕಮಾಂಡ್‍ಗೆ ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹಣ ನೀಡಿದ್ದಾರೆ ಎಂದು ನಾನು ಹೇಳಿದಾಗ, ನನ್ನನ್ನು ಬಾಯಿಗೆ ಬಂದಂತೆ ಟೀಕಿಸಿದರು. ಮಾನಸಿಕ ಅಸ್ವಸ್ಥ , ನಿಮ್ಹಾನ್ಸ್‍ಗೆ ಹೋಗಲಿ ಎಂದು ಹೇಳಿದ್ದವರು ಈಗ ಯಾವ ಆಸ್ಪತ್ರಗೆ ಹೋಗುತ್ತೀರಿ ಎಂದು ಯಡಿಯೂರಪ್ಪ ವ್ಯಂಗವಾಡಿದರು.

ಡೈರಿ ಅಸ್ತ್ರ:

ನಾನು ಭ್ರಷ್ಟಾಚಾರ ಎಸಗಿದ್ದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯನವರು ಈಗ ಯಾವ ಕಾರಣಕ್ಕಾಗಿ ಮೌನ ವಹಿಸಿದ್ದಾರೆ. ಅವರ ನಿಗೂಢ ನಡೆ ನೋಡಿದರೆ ಅಪರಾಧ ಮನೋಭಾವನೆ ಎದ್ದು ಕಾಣುತ್ತಿದೆ ಎಂದು ಹೇಳಿದರು.   ಡೈರಿ ಬಹಿರಂಗಗೊಂಡಿರುವುದರಿಂದ ಸ್ವಲ್ಪವೂ ವಿಳಂಬ ಮಾಡದೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ವಿಧಾನಸಭೆ ವಿಸರ್ಜಿಸಿ ಜನತಾ ನ್ಯಾಯಾಲಯದ ಮುಂದೆ ಬನ್ನಿ ಯಾರ ಬಲ ಎಷ್ಟೆಷ್ಟು ಗೊತ್ತಾಗುತ್ತದೆ ಎಂದು ಪಂಥಾಹ್ವಾನ ನೀಡಿದರು.   ಮುಂದಿನ ಚುನಾವಣೆಯಲ್ಲಿ ಡೈರಿ ವಿಷಯವೇ ನಮಗೆ ಪ್ರಮುಖ ಅಸ್ತ್ರವಾಗಲಿದೆ. ಇದು ಕೇವಲ ಒಂದು ನಿದರ್ಶನ ಮಾತ್ರ. ಸಿದ್ದರಾಮಯ್ಯನವರು ಅಧಿಕಾರ ಉಳಿಸಿಕೊಳ್ಳಲು ಇನ್ನು ಏನೇನು ಮಾಡುತ್ತಾರೆಂಬುದು ದಾಖಲೆ ಸಮೇತ ನೀಡುತ್ತೇನೆ ಎಂದರು.

ಬಿಬಿಎಂಪಿಯಲ್ಲಿ ಮೂರುವರೆ ಸಾವಿರ ಕೋಟಿ ಹಗರಣ ನಡೆದಿದೆ. ತೆರಿಗೆ ಹಣವನ್ನೇ ನುಂಗಿ ಹಾಕಿದ್ದಾರೆ. ಶೀಘ್ರದಲ್ಲೇ ಇದನ್ನು ಕೂಡ ದಾಖಲೆ ಬಿಡುಗಡೆ ಮಾಡಿ ಕಾಂಗ್ರೆಸ್ ಸರ್ಕಾರದ ನಿಜಬಣ್ಣವನ್ನು ಬಯಲು ಮಾಡುತ್ತೇನೆ ಎಂದು ಗುಡುಗಿದರು.   ವಿಧಾನಪರಿಷತ್ ಸದಸ್ಯ ಗೋವಿಂದರಾಜು ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಡೈರಿ ಪತ್ತೆಯಾಗಿದೆ. ಈಗ ಆ ಡೈರಿಯೆ ನನ್ನದಲ್ಲ ಎಂದು ಗೋವಿಂದರಾಜು ಹೇಳುತ್ತಿದ್ದಾರೆ. ಮೊದಲು ಡೈರಿ ಹೇಗೆ ಸಿಕ್ಕಿದೆ ಎಂದು ನನ್ನನ್ನು ಪ್ರಶ್ನಿಸಿದರು. ಈಗ ನನ್ನದಲ್ಲ ಎನ್ನುತ್ತಿದ್ದಾರೆ. ಅವರ ಪರಿಸ್ಥಿತಿ ನೋಡಿದರೆ ಪೋಸ್ಟ್ ಮ್ಯಾನ್ ರೀತಿ ಕೆಲಸ ಮಾಡಿದ್ದಾರೆ. ಅವರದು ಎಳ್ಳಷ್ಟು ತಪ್ಪಿಲ್ಲ ಎಂದು ವ್ಯಂಗ್ಯವಾಡಿದರು.

ಮುಂದಿನ ಹೋರಾಟದ ಬಗ್ಗೆ ಪಕ್ಷದ ನಾಯಕರ ಜೊತೆ ರೂಪುರೇಷೆ ಸಿದ್ದಪಡಿಸಲಾಗುವುದು. ಕಾಂಗ್ರೆಸ್ ಸರ್ಕಾರದ ಒಂದೊಂದು ಹಗರಣವನ್ನು ಬಯಲು ಮಾಡುವವರೆಗೂ ನಾನು ಸುಮ್ಮನೆ ಕೂರುವುದಿಲ್ಲ ಎಂದು ಗುಡುಗಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin