ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿಲ್ಲ, ಮುಂದಿನ ಎಲೆಕ್ಷನ್ ಗೆ ತಯಾರಿ ನಡೆಸಿದ್ದೇವೆ : ಸಿದ್ದರಾಮಯ್ಯ

Siddaramaiah-01

ಬೆಂಗಳೂರು, ಏ.16-ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಗೆ ನಾವು ಸಿದ್ದತೆಗಳನ್ನು ಮಾಡಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿಯಲ್ಲಿಂದು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್‍ನ ಭದ್ರಕೋಟೆ. ಎಸ್.ಬಂಗಾರಪ್ಪ ಬಿಜೆಪಿ ಸೇರ್ಪಡೆಯಿಂದ ಹಾಗೂ ಕುಮಾರಸ್ವಾಮಿ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡದಿರುವುದರಿಂದ ಇಲ್ಲಿಬಿಜೆಪಿ ಬಲಗೊಂಡಿತು. ಅಷ್ಟನ್ನು ಹೊರತುಪಡಿಸಿದರೆ ಬಿಜೆಪಿಗೆ ಹೆಚ್ಚಿನ ಸ್ಥಾನ ಬರುತ್ತಿರಲಿಲ್ಲ.ನಮ್ಮ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಆಡಳಿತವಿರೋಧಿ ಅಲೆ ಇಲ್ಲ. ಉಪಚುನಾವಣೆ ಫಲಿತಾಂಶದಿಂದ ಇದು ಸಾಬೀತಾಗಿದೆ. ಉತ್ತರ ಭಾರತದ ತಂತ್ರಗಾರಿಕೆ ನಮ್ಮ ರಾಜ್ಯದಲ್ಲಿನಡೆಯುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.  ಸದ್ಯಕ್ಕೆ ರೈತರ ಸಾಲವನ್ನು ಮನ್ನಾ ಮಾಡುವುದಿಲ್ಲ. ರಾಷ್ಟ್ರೀಯ ಬ್ಯಾಂಕ್‍ಗಳು, ಸಹಕಾರಿ ಬ್ಯಾಂಕ್‍ಗಳು ಸೇರಿದಂತೆ 52 ಸಾವಿರ ಕೋಟಿ ರೈತರ ಸಾಲವಿದೆ. ಸಾಲ ಮನ್ನಾ ಮಾಡಲು ಕೇಂದ್ರ ನೆರವು ನೀಡಬೇಕು. ರಾಜ್ಯದಲ್ಲಿ ಬರಗಾಲವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದೇವೆ ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷ ಸರ್ವರಿಗೂ ಸಮಬಾಳು, ಸಮಪಾಲು ಎಂಬ ಹಿನ್ನೆಲೆಯಲ್ಲಿ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದೆ ಎಂದು ಹೇಳಿದರು.

ಪ್ರಧಾನಿ ಆಸಕ್ತಿ ಇಲ್ಲ:

ಮಹದಾಯಿ ನದಿ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಆಸಕ್ತಿ ಇಲ್ಲ. ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಕರೆದು ವಿವಾದ ಬಗೆಹರಿಸಿ ನಮ್ಮ ರಾಜ್ಯಕ್ಕೆ ಕುಡಿಯುವ ನೀರು ಒದಗಿಸಬಹುದು. ಆದರೆ ಅವರಿಗೆ ಯಾವುದೇ ಆಸಕ್ತಿ ಇದ್ದಂತಿಲ್ಲ. ಕೇಂದ್ರಕ್ಕೆ ಈ ಬಗ್ಗೆ ನಿಯೋಗ ಕೊಂಡೊಯ್ದಾಗ ಬಿಜೆಪಿ ಸಂಸದರು ಒಬ್ಬರೂ ಮಾತನಾಡಲಿಲ್ಲ ಎಂದು ಆರೋಪಿಸಿದರು.

ರಾಜಕೀಯ ಜ್ಞಾನವಿಲ್ಲ:

ಸಂಸದ ಪ್ರತಾಪ್‍ಸಿಂಹ ಅವರಿಗೆ ಇನ್ನೂ ರಾಜಕೀಯ ಜ್ಞಾನವಿಲ್ಲ. ಅವರು ಅರೆಜ್ಞಾನ ಹೊಂದಿದ್ದಾರೆ. ಗೀತಾ ಮಹದೇವಪ್ರಸಾದ್ ವಿರುದ್ಧ ಅಸಂಬದ್ಧ ಹೇಳಿಕೆ ನೀಡುವ ಮೂಲಕ ಅವಹೇಳನ ಮಾಡಿದ್ದಾರೆ ಎಂದು ಸಿಎಂ ಹೇಳಿದರು. ರಾಜ್ಯದಲ್ಲಿ ಚುನಾವಣೆಯನ್ನು ನಾವೇ ಎದುರಿಸುತ್ತೇವೆ. ಸ್ಥಳೀಯ ಮುಖಂಡರೇ ರೂಪುರೇಷೆಗಳನ್ನು ಸಿದ್ಧಪಡಿಸುತ್ತಾರೆ. ಪ್ರಶಾಂತ್ ಕಿಶೋರ್ ಅವರನ್ನು ಚುನಾವಣಾ ತಂತ್ರ ರೂಪಿಸಲು ಕರೆಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin