ರಾಜ್ಯದಲ್ಲಿ ಬರ ಹಿನ್ನೆಲೆ : ರೈತರ ಮಕ್ಕಳಿಗೆ ಉಚಿತ ಶಿಕ್ಷಣ ಆದಿಚುಂಚನಗಿರಿ ಶ್ರೀ

ಮಂಡ್ಯ, ಮಾ.6- ತೀವ್ರ ಬರಗಾಲಕ್ಕೆ ಸಿಲುಕಿ ನೊಂದಿರುವ ರೈತಾಪಿ ವರ್ಗ, ಹಿಂದುಳಿದ ಮತ್ತು ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀ ಮಠದ ಆವರಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ರೈತರು ಬರದ ಹಿನ್ನೆಲೆಯಲ್ಲಿ ತತ್ತರಿಸಿಹೋಗಿದ್ದಾರೆ. ಇದರಿಂದ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು. ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುವುದರಿಂದ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಹಾಗಾಗಿ ಜಾತಿ-ಭೇದವಿಲ್ಲದೆ ಎಲ್ಲ ವರ್ಗದ ಮಕ್ಕಳಿಗೂ ಶ್ರೀಮಠ ಉಚಿತ ಶಿಕ್ಷಣ ಕೊಡಲಿದೆ. ಅಗತ್ಯವಿರುವವರು ಶ್ರೀಮಠವನ್ನು ಸಂಪರ್ಕಿಸುವಂತೆ ತಿಳಿಸಿದರು.

ಅದೇ ರೀತಿ ಜಾನುವಾರುಗಳಿಗೆ ಮೇವಿಗೆ ತತ್ವಾರ ಒದಗಿರುವುದರಿಂದ ತಮ್ಮ ಜಾನುವಾರುಗಳನ್ನು ಶ್ರೀಮಠದ ಆಶ್ರಯದಲ್ಲಿ ನಡೆಯುತ್ತಿರುವ ಗೋ ಸಂರಕ್ಷಣಾ ಆಶ್ರಮಕ್ಕೆ ತಂದು ಬಿಡಬಹುದು. ನಂತರ ತಮಗೆ ಅನುಕೂಲವಾದ ದಿನಗಳಲ್ಲಿ ಹಿಂಪಡೆಯಬಹುದು ಎಂದು ಹೇಳಿದರು.ಈ ಎಲ್ಲ ಸಾಮಾಜಿಕ ಕಾರ್ಯಗಳನ್ನು ಶ್ರೀಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇವೆ ಎಂದರು.ಜಾತ್ರಾ ಪ್ರಯುಕ್ತ ಹಲವಾರು ಅರ್ಥಗರ್ಭಿತ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಭಕ್ತರು ಹಾಗೂ ಜನಸಾಮಾನ್ಯರಲ್ಲಿ ಅರಿವಿನ ಜ್ಯೋತಿ ಹಚ್ಚಲು ಪ್ರಯತ್ನಿಸುತ್ತಿರುವುದಾಗಿ ಸ್ವಾಮೀಜಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin