ರಾಜ್ಯದ ಎಲ್ಲ ಜನತೆಗೂ ಭೇದ-ಭಾವವಿಲ್ಲದೆ ಆರೋಗ್ಯ ಭಾಗ್ಯ : ರಮೇಶ್‍ಕುಮಾರ್

ramesh-kumar
ಕೋಲಾರ, ಏ.13- ರಾಜ್ಯದ ಎಲ್ಲ ಜನತೆಗೂ ಅನ್ವಯವಾಗುವಂತೆ ಯಾವುದೇ ಭೇದ-ಭಾವವಿಲ್ಲದೆ ಆರೋಗ್ಯಭಾಗ್ಯ ನೀಡಲು ಯೂನಿವರ್ಸಲ್ ಹೆಲ್ತ್ ಕವರೇಜ್ ಯೋಜನೆಯನ್ನು ಅತಿ ಶೀಘ್ರದಲ್ಲೇ ರಾಜ್ಯ ಸರ್ಕಾರ ಜಾರಿಗೆ ತರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‍ಕುಮಾರ್ ಇಂದಿಲ್ಲಿ ಹೇಳಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಈಗಿರುವ ಎಲ್ಲ ಆರೋಗ್ಯ ಭಾಗ್ಯ ಯೋಜನೆಗಳನ್ನು ರದ್ದುಮಾಡಿ ಸಾಮಾನ್ಯ ಜನರು, ಸರ್ಕಾರಿ, ಖಾಸಗಿ ಉದ್ಯೋಗಿಗಳು, ವೈದ್ಯರು, ರಾಜಕಾರಣಿಗಳು ಹೀಗೆ ಎಲ್ಲರಿಗೂ ಅನ್ವಯವಾಗುವಂತೆ ಈ ಯೋಜನೆ ಜಾರಿಗೆ ತರುವುದಾಗಿ ಹೇಳಿದರು.

ಪ್ರತಿ ಜಿಲ್ಲೆಗಳಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯಲಾಗುವುದು. ಈಗಾಗಲೇ ಸರ್ಕಾರಿ ವೈದ್ಯಕೀಯ ಕಾಲೇಜುಗಳಿರುವ ಕಡೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಒಂದು ಆಯುರ್ವೇದಿಕ್ ಆಸ್ಪತ್ರೆ, 100 ಹಾಸಿಗೆಯುಳ್ಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ತೆರೆಯಲು ಉದ್ದೇಶಿಸಲಾಗಿದೆ. ಕೋಲಾರ ವಿಶ್ವವಿದ್ಯಾಲಯಕ್ಕೆ ಮೇ ಅಂತ್ಯದೊಳಗೆ ಅಧಿಕೃತ ಘೋಷಣೆಯಾಗಲಿದೆ ಎಂದು ಅವರು ಹೇಳಿದರು.
ರೈತರ ಸಾಲಮನ್ನಾದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ರೈತರ ಸಾಲಮನ್ನಾ ಎಂದರೆ ಯಾರ ಸಾಲ ಮನ್ನಾ ಎಂದು ಹೇಳುತ್ತ, ಸಹಕಾರಿ ಬ್ಯಾಂಕ್‍ಗಳು, ಖಾಸಗಿ ಬ್ಯಾಂಕ್‍ಗಳು, ಸರ್ಕಾರಿ ಬ್ಯಾಂಕ್‍ಗಳು ಹೀಗೆ ಎಲ್ಲ ಬ್ಯಾಂಕ್‍ಗಳಲ್ಲಿಯೂ ಪರಿಶೀಲನೆ ನಡೆಸಿದ ನಂತರ ಯಾರು ರೈತರು ಎಂಬ ಬಗ್ಗೆ ಪರಿಶೀಲಿಸಿ ಸಾಲ ಮನ್ನಾದ ಬಗ್ಗೆ ಚಿಂತಿಸಲಾಗುವುದು ಎಂದರು.

ರೈತರಿಗೆ ಯಾವುದೇ ಅನ್ಯಾಯವಾಗದಂತೆ ಶೂರಿಟಿ ಕೇಳದೆ ಸಾಲ ಕೊಟ್ಟು ಆತನ ಕಾರ್ಯಕ್ಕೆ ಬಲ ತುಂಬಬೇಕು. ಇದನ್ನು ಮಾತ್ರ ರೈತ ಬಯಸುತ್ತಾನೆ.
ರೈತರು ಬೆಳೆದ ಬೆಳೆಗೆ ಖಾಸಗಿ ವ್ಯಕ್ತಿಗಳು ಬೆಲೆ ನಿಗದಿಪಡಿಸುವುದರಿಂದಲೇ ರೈತ ಸಂಕಷ್ಟಕ್ಕೀಡಾಗುತ್ತಿರುವುದು ಎಂದು ಬೇಸರ ವ್ಯಕ್ತಪಡಿಸಿದರು.
ಕೋರಮಂಗಲ-ಚಲ್ಲಘಟ್ಟ ನೀರಾವರಿ ಯೋಜನೆ ಪ್ರಗತಿಯಲ್ಲಿದ್ದು, ಆರು ಹಂತದ ಕಾಮಗಾರಿ ಇಷ್ಟು ರಭಸವಾಗಿ ನಡೆಯುತ್ತಿರುವುದು ಸರ್ಕಾರದ ಮೊದಲ ಯೋಜನೆ ಇದಾಗಿದೆ. ಆ.15ರೊಳಗೆ ನೀರು ಹರಿಸುವುದಾಗಿ ಭರವಸೆ ನೀಡಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin